ಕೊರ್ಬಾ: ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. 11 ವರ್ಷದ ಬಾಲಕ 4 ವರ್ಷದ ಅಮಾಯಕ ಮಗುವಿನ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಕೊಂದಿದ್ದಾನೆ. ಅಷ್ಟೇ ಅಲ್ಲ, ಆ ಬಾಲಕ ಮಗುವಿನ ಶವವನ್ನು ವಿಲೇವಾರಿ ಮಾಡಿ, ಮನೆಗೆ ಹೋಗಿ ರಕ್ತಸಿಕ್ತವಾಗಿದ್ದ ತನ್ನ ಬಟ್ಟೆಗಳನ್ನು ಯಾರಿಗೂ ತಿಳಿಯದಂತೆ ಒಗೆದು ಮೂಲೆಯಲ್ಲಿಟ್ಟಿದ್ದನು. ಈ ಘಟನೆ ನಿನ್ನೆ ರಾತ್ರಿ ಮಾಣಿಕ್ಪುರ ಹೊರ ಪೊಲೀಸ್ ಠಾಣಾ ವ್ಯಾಪ್ತಿಯ ಕೌಭಟ್ಟಾ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ? : ನನ್ನ ನಾಲ್ಕು ವರ್ಷದ ಮಗ ನಾಪತ್ತೆಯಾಗಿದ್ದಾನೆ ಎಂದು ಏಪ್ರಿಲ್ 20ರಂದು ಕೌಭಟ್ಟಾ ನಿವಾಸಿ ಶ್ಯಾಮ್ದಾಸ್ ಸಾರಥಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ 21ರ ತಡರಾತ್ರಿ 4 ವರ್ಷದ ಮಗುವಿನ ಶವ ರಕ್ತದಿಂದ ತೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಗು ಮುದಪರ ನಿವಾಸಿ ಅಂಶು ಸಾರಥಿ ಎಂದು ಗುರುತಿಸಲಾಗಿದೆ. ಮಗುವಿನ ಶವ ಪತ್ತೆಯಾದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಕುರಿತು ಮಾಹಿತಿ ಪಡೆದ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡಿದ್ದರು.
ಸ್ಥಳದಲ್ಲಿ ಬೀಡುಬಿಟ್ಟ ಪೊಲೀಸ್ ತಂಡ : ತನಿಖೆ ಭಾಗವಾಗಿ ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನದಳದ ತಂಡ ಕೂಡ ರಾತ್ರಿಯೇ ಸ್ಥಳಕ್ಕೆ ತಲುಪಿದೆ. ಈ ಸಮಯದಲ್ಲಿ ಸ್ನಿಫರ್ ಡಾಗ್ ಬಾಘಾ ಕೊಲೆಯಾದ ಅಮಾಯಕ ಅಂಶುವಿನ ಬಟ್ಟೆಗಳನ್ನು ವಾಸನೆ ಮಾಡುತ್ತಾ ನೇರವಾಗಿ ಬಡಾವಣೆಗೆ ನುಗ್ಗಿದೆ.
ಓದಿ: ಹುಚ್ಚನಂತೆ ಓಡೋಡಿ ಬಂದು ಮಕ್ಕಳೆದುರೇ ತಾಯಿಯನ್ನು ಬರ್ಬರವಾಗಿ ಕೊಂದ ಕೊಲೆಗಾರ!
ಬಾಲಕನ ಬಂಧನ : ಸ್ನಿಫರ್ ಡಾಗ್ವೊಂದು ಬಡಾವಣೆಯ ಮನೆಯೊಂದಕ್ಕೆ ಪ್ರವೇಶಿಸಿದೆ. ಈ ವೇಳೆ ಮನೆಯಲ್ಲಿದ್ದ 11 ವರ್ಷದ ಬಾಲಕನನ್ನು ನೋಡಿ ಸ್ನಿಫರ್ ಡಾಗ್ ಬೊಗಳತೊಡಗಿತು. ತಕ್ಷಣ ಪೊಲೀಸರು ಶ್ವಾನವನ್ನು ಬಿಡುಗಡೆ ಮಾಡಿದಾಗ ಬಾಘಾ ಕೊಲೆ ಮಾಡಿದ ಆರೋಪಿ ಮೇಲೆ ದಾಳಿಗೆ ಮುಂದಾಯಿತು. ಬಳಿಕ ಶ್ವಾನವನ್ನು ಹಿಂಪಡೆದ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು.
ಕೊಲೆಗೆ ಕಾರಣವೇನು? : ಕೊಲೆಯಾದ 4 ವರ್ಷದ ಮಗು 11 ವರ್ಷದ ಬಾಲಕನಿಗೆ ಆಟವಾಡುತ್ತಿರುವಾಗ ತೊಂದರೆ ಕೊಡುತ್ತಿತ್ತು. ಈ ವಿಷಯದಿಂದಾಗಿ ಬಾಲಕ ತುಂಬಾ ನೊಂದಿದ್ದನು. ಹೀಗಾಗಿ, ತೀವ್ರ ಕೋಪಗೊಂಡು ಬಾಲಕ ಅಂಶು ಸಾರಥಿಯ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆ ವೇಳೆ ಹೇಳಿದ್ದಾನೆ.
ಶವ ವಿಲೇವಾರಿ! : ಕೊಲೆ ಮಾಡಿದ ಬಳಿಕ ಮಗುವಿನ ಶವವನ್ನು ಮನೆಯ ಸಮೀಪವಿರುವ ಪೊದೆಗಳಲ್ಲಿ ಮುಚ್ಚಿ ಹಾಕಿದ್ದಾನೆ. ಗುರುವಾರ ರಾತ್ರಿ 11 ಗಂಟೆಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಬಳಿಕ ಎಸ್ಪಿ ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದರು. ವಿಚಾರಣೆ ಬಳಿಕ ಮಗುವಿನ ಕೊಲೆಯ ರಹಸ್ಯ ಬಹಿರಂಗಗೊಂಡಿತು. ಸದ್ಯ ಆರೋಪಿ ಬಾಲಕನನ್ನು ಬಾಲಪರಾಧ ವಿಭಾಗಕ್ಕೆ ಒಪ್ಪಿಸಲಾಗಿದೆ.