ಜೈಪುರ (ರಾಜಸ್ಥಾನ): ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಹಾಕಲಾದ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಶಹಾಪುರ ಪಂಚಾಯಿತಿಯ ಗಿರ್ಡಿಯಾ ಎಂಬ ಗ್ರಾಮದಲ್ಲಿ ಈ ಮೃತದೇಹ ಪತ್ತೆಯಾಗಿದೆ. ಘಟನೆ ಖಂಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿದರು. ಬುಧವಾರ ಆಡು ಮೇಯಿಸಲು ಹೋಗಿದ್ದ ಬಾಲಕಿಯು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ಬಾರದಿರುವುದನ್ನು ಕಂಡು ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದರು. ರಾತ್ರಿಯೇ ದೂರು ನೀಡಲು ತೆರಳಿದ್ದ ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಇಂದು (ಗುರುವಾರ) ಬೆಳಗ್ಗೆ ಸಾಕಷ್ಟು ಹುಡುಕಾಟದ ಬಳಿಕ ಕಲ್ಲಿದ್ದಲು ಭಟ್ಟಿಯಲ್ಲಿ ಆಕೆಯ ಮೃತದೇಹ ಸುಟ್ಟು ಹಾಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ಮಕ್ಕಳು ಸೇರಿದಂತೆ ಮಹಿಳೆಯರಿಗೆ ಭದ್ರತೆ ಇಲ್ಲದಾಗಿದೆ. ಇಂತಹ ಘಟನೆಗಳು ಪದೆ ಪದೇ ನಡೆಯುತ್ತಲೇ ಇವೆ. ಇದು ನಿಲ್ಲಬೇಕು. ಅಲ್ಲದೇ ಈ ಅಪ್ರಾಪ್ತ ಬಾಲಕಿಯ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮಾಜಿ ಸಚಿವ ಕಾಲು ಲಾಲ್ ಗುರ್ಜರ್ ಸೇರಿದಂತೆ ಹಲವರು ನ್ಯಾಯಕ್ಕಾಗಿ ಪಟ್ಟು ಹಿಡಿದರು. ಪರಿಸ್ಥಿತಿಯನ್ನು ಅರಿತ ಪೊಲೀಸರು ಅವರನ್ನು ಸಮಾಧಾನ ಮಾಡಿದರು.
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬಳಿಕ ಕಲ್ಲಿದ್ದಲು ಕುಲುಮೆಗೆ ಎಸೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೋಷಕರು ಹೇಳುವಂತೆ ಬಾಲಕಿ ಬುಧವಾರ ಆಡುಗಳ ಜೊತೆ ಮನೆಯಿಂದ ಹೊರಬಂದಿದ್ದಳು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಡುಗಳು ಹಿಂತಿರುಗಿದ್ದರೂ, ಬಾಲಕಿ ಮಾತ್ರ ಬಂದಿರಲಿಲ್ಲ. ಅನುಮಾನಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದರು. ಬಳಿಕ ಕಲ್ಲಿದ್ದಲು ಕುಲುಮೆ ಬಳಿ ಹುಡುಕುತ್ತಿದ್ದಾಗ ಆಕೆಯ ಚಪ್ಪಲಿ ಕಂಡಿದ್ದವು. ಕಲ್ಲಿದ್ದಲು ಭಟ್ಟಿ ಹತ್ತಿ ನೋಡಿದಾಗ ಆಕೆಯ ಮೃತ ದೇಹ ಪತ್ತೆಯಾಗಿದೆ.
ಬೆಂಕಿಯಲ್ಲಿ ಬಾಲಕಿ ಧರಿಸಿದ್ದ ಬೆಳ್ಳಿಯ ಬಳೆಗಳು ಮತ್ತು ಮೂಳೆಯಗಳು ಕಂಡುಬಂದಿವೆ. ದುಷ್ಕರ್ಮಿಗಳು ಆಕೆಯನ್ನು ಅತ್ಯಾಚಾರ ಮಾಡಿ ಬಳಿಕ ಕಲ್ಲಿದ್ದಲು ಭಟ್ಟಿಗೆ ಎಸೆದಿರುವ ಶಂಕೆ ಇದೆ. ಅನುಮಾನದ ಹಿನ್ನೆಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ಕು ಠಾಣೆಗಳ ಪೊಲೀಸ್ ಅಧಿಕಾರಿಗಳು ತಡರಾತ್ರಿ ಸ್ಥಳಕ್ಕೆ ಆಗಮಿಸಿದ್ದರು. ರಾತ್ರಿಯೇ ಫೋರೆನ್ಸಿಕ್ ತಂಡವನ್ನು ಸ್ಥಳಕ್ಕೆ ಕರೆಸಲಾಗಿತ್ತು. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗಿದೆ. ಆ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Manipur violence: ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟ ಕುಕಿ ಸಮುದಾಯದ 35 ಶವಗಳ ಸಾಮೂಹಿಕ ಅಂತ್ಯಕ್ರಿಯೆ