ಶ್ರೀಕಾಳಹಸ್ತಿ (ಆಂಧ್ರಪ್ರದೇಶ) : ಹೆತ್ತ ಪೋಷಕರೇ ಮಗಳಿಗೆ ವಿಲನ್ ಆಗಿದ್ದಾರೆ. ಚಿಕ್ಕ ವಯಸ್ಸಿನ ಬಾಲಕಿಗೆ ರಹಸ್ಯವಾಗಿ ತಂದೆ-ತಾಯಿ ಬಾಲ್ಯ ವಿವಾಹ ಮಾಡಿರುವ ಘಟನೆ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಚಿತ್ತೂರು ಜಿಲ್ಲೆಯ ಪಾಠಕುಂಟ ಗ್ರಾಮದ ವೇದುರುಕುಪ್ಪಂ ಮಂಡಲದಲ್ಲಿ ಈ ಘಟನೆ ಜರುಗಿದೆ. ತಮ್ಮ 16 ವರ್ಷದ ಮಗಳನ್ನು ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ರಾಜಶೇಖರ್ ರೆಡ್ಡಿ ಎಂಬ 34 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ಐಸಿಡಿಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಹೋಗುವಷ್ಟರಲ್ಲಿ ಬಾಲಕಿಯ ಅತ್ತೆ ಮಹಾನ್ ನಾಟಕವನ್ನೇ ಆಡಿದ್ದಾಳೆ.
ಅಧಿಕಾರಿಗಳು ಸ್ಥಳಕ್ಕೆ ಬರುವ ಮುನ್ನ ಆಕೆಯ ಕತ್ತಿನಲ್ಲಿದ್ದ ಮಂಗಳಸೂತ್ರವನ್ನು ಬಾಲಕಿಯ ಅತ್ತೆ ತೆಗೆದಿದ್ದಾಳೆ. ಅಧಿಕಾರಿಗಳಿಗೆ ಇಲ್ಲಿ ಯಾವುದೇ ಮದುವೆ ನಡೆದಿಲ್ಲ ಎಂದು ಬಿಂಬಿಸಿದ್ದಾರೆ.
ಬಾಲಕಿ ಗುರುವಾರ ಎಸ್‌ಐ ಲೋಕೇಶ್ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ. ನನ್ನ ಪೋಷಕರು 34 ವರ್ಷದ ವ್ಯಕ್ತಿಯ ಜೊತೆ ರಹಸ್ಯ ಮತ್ತು ಬಲವಂತವಾಗಿ ವಿವಾಹ ಮಾಡಿಸಿದ್ದಾರೆ. ಹಾಗೆಯೇ ಈ ಘಟನೆಯನ್ನು ಮರೆ ಮಾಚಲು ಮದುಮಗ ಮನೆಯವರು ತಾಳಿಯನ್ನು ಕತ್ತಿನಿಂದ ತೆಗೆಸಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಘಟನೆ ಕುರಿತು ಶೀಕಾಳಹಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.