ಶಿಲ್ಲಾಂಗ್: ಇತ್ತೀಚಿನ ಐಇಡಿ ಸ್ಫೋಟಕ್ಕೆ ಸಂಬಂಧಿಸಿದಂತೆ ಈ ವಾರದ ಆರಂಭದಲ್ಲಿ ಬಂಧಿತನಾದ 17 ವರ್ಷದ ಬಾಲಕ ಕಳೆದ ವರ್ಷ ನಗರದ ವಿವಿಧ ಕಡೆ ಸ್ಫೋಟ ಕೃತ್ಯ ನಡೆಸುವ ಸ್ಕೆಚ್ ಹಾಕಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಬಾಲಕನೇ ತನಿಖಾ ಸಂಸ್ಥೆಗಳ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಷ್ಠಿತ ಕಾಲೇಜಿನ 12ನೇ ತರಗತಿಯ ವಿದ್ಯಾರ್ಥಿಯು ಇಲ್ಲಿನ ಆಡಳಿತಾರೂಢ ಎನ್‌ಪಿಪಿ ಕಚೇರಿಯಲ್ಲಿ ಸುಧಾರಿತ ಸ್ಫೋಟಕ ಇಡುವಲ್ಲಿ ಭಾಗಿಯಾಗಿದ್ದ. ಇಷ್ಟೇ ಅಲ್ಲದೇ ಆಗಸ್ಟ್ 2021 ರಲ್ಲಿ ಲೈತುಮ್‌ಖ್ರಾದಲ್ಲಿ ಐಇಡಿ ದಾಳಿಯನ್ನು ಆಯೋಜಿಸಿದ ತಂಡದಲ್ಲಿ ಕೂಡ ಈತ ಇದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 30 ರಂದು ಇಲ್ಲಿನ ಪೊಲೀಸ್ ಬಜಾರ್‌ನಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಲಕನನ್ನು ಬಂಧಿಸಲಾಗಿದ್ದು, ಆತನ ನಿವಾಸದಿಂದ ಜೀವಂತ ಐಇಡಿ ಮತ್ತು ಕೆಲವು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೇಘಾಲಯದ ಗೃಹ ಸಚಿವ ಲಖ್ಮೆನ್ ರಿಂಬುಯಿ ಹೇಳಿದ್ದರು.
ಓದಿ: ಗಾನ ಕೋಗಿಲೆ ಕಳೆದುಕೊಂಡು ಶೋಕ ಸಾಗರದಲ್ಲಿ ಮುಳಗಿದ ಭಾರತ... ಲತಾ ದೀದಿ ನೆನೆದು ಕಣ್ಣೀರಿಟ್ಟ ಸಿನ್ಹಾ!
ಬಾಲಕ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಆಗಿರುತ್ತಿದ್ದನು. ಸಾಮಾಜಿಕ ಮಾಧ್ಯಮದ ಮೂಲಕ ಬಾಲಕ ತಮ್ಮ ಹ್ಯಾಂಡ್ಲರ್‌ಗಳೊಂದಿಗೆ ಪರಿಚಯ ಮಾಡಿಕೊಂಡನು. ಅಲ್ಲಿ ಅವರು ಮಾತುಗಳಿಗೆ ಪ್ರಭಾವಿತನಾಗಿ ದಾರಿ ತಪ್ಪಿದ್ದಾನೆ. ಈ ಬಾಲಕನೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಇಬ್ಬರು ಬಾಲಕರನ್ನು (ಸುಮಾರು 17 ವರ್ಷ ವಯಸ್ಸಿನವರು) ಬಂಧಿಸಿ ಇಲ್ಲಿನ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಷೇಧಿತ ಹಿನ್ನಿವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಯುವಕರನ್ನು ಸಂಪರ್ಕಿಸಲು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸುತ್ತದೆ ಮತ್ತು ತನಿಖಾ ಸಂಸ್ಥೆಗಳು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಉನ್ನತ ಅಧಿಕಾರಿಗಳು ಕೂಡ ಮೇಘಾಲಯ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಗೃಹ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.