ಹೈದರಾಬಾದ್: ಪೋಷಕರಿಗೆ ತಮ್ಮ ಮಕ್ಕಳೇ ಸರ್ವಸ್ವ. ದೇಹಕ್ಕೆ ಕಣ್ಣುಗಳಂತಿರುವ ಮಕ್ಕಳಿಗೆ ಅತ್ಯುತ್ತಮ ಬದುಕು ರೂಪಿಸಿ ಕೊಡಲು ತಂದೆ-ತಾಯಿ ಪ್ರಾಣವನ್ನೇ ಮುಡಿಪಿಡುತ್ತಾರೆ. ಇದನ್ನರಿಯದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು, ಮನೆಯ ಆರ್ಥಿಕ ಸ್ಥಿತಿಗತಿಯಿಂದ ನೊಂದು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ಪೋಷಕರಿಗೆ ಹೊರೆಯಾಗಬಾರದು ಎಂದು ಯೋಚಿಸಿ ಆತ್ಮಹತ್ಯೆಯ ದಾರಿ ತುಳಿದಿದ್ದಾನೆ. ಈ ಮನಕಲಕುವ ಘಟನೆ ಇಲ್ಲಿನ ಕಿಶನ್ಬಾಗ್ ಎಂಬಲ್ಲಿ ನಡೆದಿದೆ.
ವಿವರ:
ಕಿಶನ್ಬಾಗ್ ನಿವಾಸಿ ಪವನ್ಗೆ 17 ವರ್ಷ. ಇತ್ತೀಚೆಗೆ ಅನಾರೋಗ್ಯ ಸಮಸ್ಯಯಿಂದ ಬಳಲುತ್ತಿದ್ದ ಪವನ್ ವೈದ್ಯರ ಬಳಿ ತೆರಳಿದ್ದ. ಈತನ ಸಮಸ್ಯೆ ಆಲಿಸಿದ ವೈದ್ಯರು, ತಪಾಸಣೆ ನಡೆಸಿ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಂಗತಿ ಕೇಳಿ ವಿಚಲಿತನಾದ ಪವನ್ ಮನೆಯಲ್ಲಿ ತಿಳಿಸಲಿಲ್ಲ. ಬದಲಾಗಿ ಗಾಢವಾಗಿ ಚಿಂತಿಸತೊಡಗಿದ್ದ. ಪೋಷಕರ ಆರ್ಥಿಕ ಪರಿಸ್ಥಿತಿ ಆತನನ್ನು ಮತ್ತಷ್ಟು ಜರ್ಜರಿತಗೊಳಿಸಿದೆ. ಹಾಗಾಗಿ, ತನ್ನಿಂದ ತಂದೆ-ತಾಯಿಗೆ ಯಾವುದೇ ರೀತಿಯೂ ತೊಂದರೆಯಾಗದಿರಲಿ ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದ.
ಡೆತ್ನೋಟ್ನಲ್ಲಿ ಏನಿದೆ?:
‘ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ನನಗೆ ಹೃದಯ ಸಂಬಂಧಿ ಸಮಸ್ಯೆಯಿದೆ. ವೈದ್ಯಕೀಯ ಖರ್ಚಿಗಾಗಿ ನಿಮಗೆ ಕಷ್ಟ ಕೊಡಲು ನನಗಿಷ್ಟವಿಲ್ಲ. ಈ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನೀವಂದ್ರೆ ನನಗೆ ತುಂಬಾ ಇಷ್ಟ. ನನ್ನ ಮೊಬೈಲ್ ಫೋನ್ ಮಾರಾಟ ಮಾಡಿ ಬಂದ ಹಣದಿಂದ ನನ್ನ ಅಂತ್ಯಕ್ರಿಯೆ ನೆರವೇರಿಸಿ. ಇಲ್ಲವಾದಲ್ಲಿ ನನ್ನ ಮೇಲೆ ಆಣೆ’ - ಪವನ್