ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದಿರುವ ಮಹಿಳೆಯ ರೇಪ್, ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಅಪ್ರಾಪ್ತನನ್ನು ಬಂಧಿಸಿದ್ದಾರೆ.
ನವೆಂಬರ್ 15ರಂದು ದೆಹಲಿಯ ದ್ವಾರಕಾ ಸೆಕ್ಟರ್-2 ದಾಬ್ರಿ ಪ್ರದೇಶದಲ್ಲಿನ ಚರಂಡಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆಯ ಹಂತದಲ್ಲಿ ಘಟನಾ ಸ್ಥಳದಲ್ಲಿನ ಕೆಲ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರಿಗೆ ಅಪ್ರಾಪ್ತ ವಾಸವಾಗಿದ್ದ ಮನೆಗೆ ಮಹಿಳೆ ಮನೆಗೆಲಸ ಮಾಡಲು ಹೋಗಿರುವುದು ಕಂಡು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಶಂಕರ್ ಚೌಧರಿ ಮಾಹಿತಿ ನೀಡಿದ್ದು, ಭಯೋತ್ಪಾದಕ ನಿಗ್ರಹ ದಳ ಹಾಗೂ ಪೊಲೀಸ್ ವಿಶೇಷ ದಳದ ಸಿಬ್ಬಂದಿ ತನಿಖೆ ಕೈಗೊಂಡಿದ್ದರು. ಆರೋಪಿ ಬಾಲಕ ಮಹಿಳೆಯ ಕೈಕಾಲು ಕಟ್ಟಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆ. ಆ ಬಳಿಕ ಸಾಕ್ಷ್ಯಾಧಾರ ಅಳಿಸಿಹಾಕಲು ಆಕೆಯ ಖಾಸಗಿ ಅಂಗಗಳು ಹಾಗೂ ಮುಖವನ್ನು ಸುಟ್ಟು ಹಾಕಿದ್ದ. ಇದೀಗ ಆರೋಪಿಯನ್ನು ಬಂಧಿಸಿದ್ದೇವೆ. ಪ್ರಕರಣದ ವಿಚಾರಣೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ನಂತರ ಸಾಕ್ಷ್ಯನಾಶ ಮಾಡಲು ಖಾಸಗಿ ಭಾಗಗಳಿಗೆ ಬೆಂಕಿ ಹಂಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ಇದನ್ನೂ ಓದಿ: ಮಮತಾ ಬ್ಯಾನರ್ಜಿ-ಸುಬ್ರಮಣಿಯನ್ ಸ್ವಾಮಿ ಭೇಟಿ: ರಾಷ್ಟ್ರ ರಾಜಕೀಯದಲ್ಲಿ ಗರಿಗೆದರಿದ ಕುತೂಹಲ
ದ್ವಾರಕಾ ಪ್ರದೇಶದಲ್ಲಿ ಮಹಿಳೆ ತನ್ನ ಗಂಡನೊಂದಿಗೆ ವಾಸವಾಗಿದ್ದು, ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದರು. ಇವರು ಕೆಲಸ ಮಾಡುತ್ತಿದ್ದ ಮನೆಯವರ ವಿಚಾರಣೆ ನಡೆಸಲಾಗಿದ್ದು, ಕೊನೆಯದಾಗಿ ಮಹಿಳೆ ಅಪ್ರಾಪ್ತ ವಾಸವಾಗಿದ್ದ ಮನೆಗೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವೇಳೆ ಆರೋಪಿಯ ಬಂಧನ ಮಾಡಿ ವಿಚಾರಣೆಗೊಳಪಡಿಸಿದಾಗ ನಿಜಾಂಶ ಹೊರಬಂದಿದೆ. ಆರೋಪಿ ಮನೆಯಿಂದಲೇ ಮಹಿಳೆಯ ಸುಟ್ಟ ಬಟ್ಟೆ, ಸೀಮೆಎಣ್ಣೆ, ಕಬ್ಬಿಣದ ಪೈಪ್ ಹಾಗೂ ಆಕೆಯನ್ನು ಕಟ್ಟಲು ಬಳಸಿದ್ದ ಟೇಪ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.