ನವದೆಹಲಿ : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಅವರು, ‘ಪ್ರಾಜೆಕ್ಟ್ಸ್ ಅಂಡ್ ಡೆವಲಪ್‌ಮೆಂಟ್ ಇಂಡಿಯಾ ಲಿಮಿಟೆಡ್ (ಪಿಡಿಐಎಲ್) ಹಣಕಾಸು ನಿರ್ದೇಶಕ ಡಿ ಎಸ್ ಸುಧಾಕರ್ ರಾಮಯ್ಯ ಅವರಿಂದ 2019-20ನೇ ಸಾಲಿನ 9.55 ಕೋಟಿ ರೂ. ಲಾಭಾಂಶ ಮತ್ತು 2020-21ನೇ ಸಾಲಿನ 6.93 ಕೋಟಿ ರೂ. ಮಧ್ಯಂತರ ಲಾಭಾಂಶವನ್ನು ಸ್ವೀಕರಿಸಿದರು.
2019-20ನೇ ಸಾಲಿನಲ್ಲಿ ಪಿಡಿಐಎಲ್ ಅತ್ಯಧಿಕ ಆರ್ಥಿಕ ಕಾರ್ಯದಕ್ಷತೆ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಲಿನಲ್ಲಿ ತನ್ನ ಕಾರ್ಯಾಚರಣೆ ಮೂಲಕ ಸಂಸ್ಥೆಯು 133.01 ಕೋಟಿ ರೂ. ಆದಾಯ ಗಳಿಸಿದೆ. ಸಂಸ್ಥೆಯು ಒಟ್ಟು ಆದಾಯ 142.16 ಕೋಟಿ ರೂ. ಇದ್ದು, 41.86 ಕೋಟಿ ರೂ. ತೆರಿಗೆ ಪೂರ್ವ ಲಾಭ ಮತ್ತು 31.83 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ.
ಓದಿ : ಏಪ್ರಿಲ್ 1ರಿಂದ ನ್ಯೂ ಅಕೌಂಟಿಂಗ್ ರೂಲ್ಸ್.. GST ವಂಚನೆ, ಆಡಿಟ್ ರೆಕಾರ್ಡ್ ತಿದ್ದುಪಡಿ ಮಾಡಿದ್ರೆ ಹುಷಾರ್!
ಪಿಡಿಐಎಲ್ ಪ್ರಸ್ತುತ ಹೆಚ್ಯುಆರ್ಎಲ್ನ ಮೂರು ಪ್ರಮುಖ ಯೋಜನೆಗಳು, ತೆಲ್ಚರ್ ಯೋಜನೆಗೆ ಯೋಜನಾ ನಿರ್ವಹಣೆ ಸಲಹೆ (ಪಿಎಂಸಿ) ಸೇವೆಗಳನ್ನು ಒದಗಿಸುತ್ತಿದೆ. ಜೊತೆಗೆ, ತೈಲ ಮತ್ತು ಅನಿಲ ವಲಯದ ಇತರೆ ಕಾರ್ಯಾದೇಶಗಳನ್ನೂ ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ.
ಪಿಡಿಐಎಲ್ ಒಂದು ‘ಮಿನಿ ರತ್ನ’, ವರ್ಗ-1 ಕ್ಕೆ ಸೇರಿದ ಪ್ರತಿಷ್ಠಿತ ವಿನ್ಯಾಸ ಇಂಜಿನಿಯರಿಂಗ್ ಮತ್ತು ಸಲಹಾ ಸಂಸ್ಥೆಯಾಗಿದೆ. ಯೋಜನಾಪೂರ್ವ ಚಟುವಟಿಕೆಗಳು, ಯೋಜನಾ ನಿರ್ವಹಣೆ ಸಲಹೆ, ವಿನ್ಯಾಸ ಮತ್ತು ಇಂಜಿನಿಯರಿಂಗ್, ಗುಣಮಟ್ಟ ಖಾತರಿ ಸೇವೆಗಳನ್ನು ಸಂಸ್ಥೆಯು ಒದಗಿಸುತ್ತದೆ.
ಲಾಭಾಂಶ ವಿತರಣೆ ವೇಳೆ ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿ ಆರ್ ಕೆ ಚತುರ್ವೇದಿ, ಜಂಟಿ ಕಾರ್ಯದರ್ಶಿ ಅಪರ್ಣಾ ಶರ್ಮ ಮತ್ತು ಪಿಡಿಐಎಲ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.