ಪೂಂಚ್ (ಜಮ್ಮು ಮತ್ತು ಕಾಶ್ಮೀರ) : ಗಡಿ ಜಿಲ್ಲೆಯಾದ ಪೂಂಚ್ ನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಇಂದು ಸಂಜೆ ಜಿಲ್ಲೆಯ ಖನೇತಾರ್ ಪ್ರದೇಶದಲ್ಲಿ ಸಿಎಒ ಸೇನಾ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೈನಿಕರು ಸಹ ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ದಾಳಿಗೂ ಮುನ್ನ ನಿನ್ನೆ (ಗುರುವಾರ) ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು, ಪೂಂಚ್ ಮತ್ತು ರಾಜೌರಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಪರಿಸ್ಥಿತಿ ಸೂಕ್ಷತೆಯಿಂದ ಕೂಡಿದ್ದು ಬಿಗುವಿನ ವಾತಾವರಣ ಇದೆ ಎಂದು ಮಾಹಿತಿ ನೀಡಿದ್ದಾರೆ. ಇದೀಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಎಂದಿನಂತೆ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳು ಉಗ್ರರನ್ನು ಸದೆ ಬಡಿಯಲು ಪ್ರದೇಶವನ್ನು ಸುತ್ತುವರಿದಿವೆ. ಮೂಲಗಳ ಪ್ರಕಾರ ಘಟನಾ ಸ್ಥಳದಿಂದ ದಾಳಿಕೋರನು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಕಳೆದ ಒಂದು ವಾರದ ಅಂತರದಲ್ಲಿ ಸೇನೆಯ ಮೇಲೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದೆ. ರಾಜೌರಿಯ ಡೇರಾ ಕಿ ಗಲಿ ಉಗ್ರರ ಅಟ್ಟಹಾಸಕ್ಕೆ ನಾಲ್ವರು ಸೈನಿಕರು ಹುತಾತ್ಮರಾಗಿದ್ದು, ಐವರು ಸೈನಿಕರು ಗಾಯಗೊಂಡಿದ್ದರು. ಒಟ್ಟಾರೇ ಕಳೆದ ಎರಡು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ಭಯೋತ್ಪಾದಕರ ದಾಳಿಯಿಂದಾಗಿ 35ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ : ಪೂಂಚ್ ಜಿಲ್ಲೆಯಲ್ಲಿ ಮೂವರು ನಾಗರಿಕರ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಸೇನೆ ಆದೇಶ