ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆ ದುರಸ್ತಿಗೆ ಮಾಡಿರುವ ವೆಚ್ಚದ ಕುರಿತು ಸಿಎಜಿ ಆಡಿಟ್ ನಡೆಸಲಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಅವರ ಶಿಫಾರಸಿನ ಮೇರೆಗೆ ಸಿಎಜಿ ವಿಶೇಷ ಆಡಿಟ್‌ಗೆ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್ 24 ಮೇ 2023 ರಂದು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು, ಮುಖ್ಯಮಂತ್ರಿಯವರ ಮನೆಯ ದುರಸ್ತಿಗೆ ಮಾಡಿದ ವೆಚ್ಚದಲ್ಲಿ ಗಂಭೀರವಾದ ಹಣಕಾಸಿನ ಅಕ್ರಮಗಳು ನಡೆದಿವೆ ಮತ್ತು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.
ಯಾವೆಲ್ಲ ವಿಚಾರದಲ್ಲಿ ಅಕ್ರಮಗಳು ನಡೆದಿವೆ ಎಂಬುದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಏಪ್ರಿಲ್ 27ರಂದು ಲೆಪ್ಟಿನೆಂಟ್ ಗವರ್ನರ್ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ 45 ಕೋಟಿ ರೂಪಾಯಿಗಳ ನವೀಕರಣ ಕಾಮಗಾರಿ ನಡೆಸಲಾಗಿದೆ, ಮುಖ್ಯಮಂತ್ರಿಗಳು ಸಾರ್ವಜನಿಕರ ಹಣವನ್ನು ನವೀಕರಣಕ್ಕೆ ಬಳಸುತ್ತಿದ್ದಾರೆ ಎಂದು ಬಿಜೆಪಿಯು ಆಪ್ ಮತ್ತು ಸಿಎಂ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿತ್ತು.
ಕೇಜ್ರಿವಾಲ್ ಅವರು ತಮ್ಮ ಮನೆಗೆ ಡಿಯರ್ ಪಾಲಿಶ್, ವಿಯೆಟ್ನಾಂ ಮಾರ್ಬಲ್, ದುಬಾರಿ ಪರದೆಗಳು ಮತ್ತು ಅತ್ಯಾಧುನಿಕ ಕಾರ್ಪೆಟ್‌ಗಳಂತಹ ಅತಿರಂಜಿತ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು ಸಿಎಂ ಬಳಸಿದ ತಮ್ಮ ಪ್ರಾಮಾಣಿಕತೆ ಮತ್ತು ಸರಳತೆಗಳನ್ನೇ ಈಗ ಅವರು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಆರೋಪಿಸಿದ್ದರು. ಈ ವೇಳೆ ಎಎಪಿ ಸಿಎಂ ಅವರನ್ನು ಸಮರ್ಥಿಸಿಕೊಂಡಿತ್ತು. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಶಿಫಾರಸಿನ ಮೇರೆಗೆ ನವೀಕರಣ ಕೈಗೊಳ್ಳಲಾಗಿದೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದ್ದರು.
ಬಿಜೆಪಿಯು ತಮ್ಮ ನಾಯಕನ ವಿರುದ್ಧ ಟೀಕೆ ಮಾಡುವ ಮೂಲಕ 'ಅದಾನಿ ಹಗರಣ' ಮತ್ತು ಪುಲ್ವಾಮಾ ಭಯೋತ್ಪಾದನಾ ದಾಳಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆಪ್ ಹೇಳಿತ್ತು. ಆದರೆ ಕಾಂಗ್ರೆಸ್ ಕೂಡ ಆಪ್ ವಿರುದ್ಧ ವಾಗ್ದಾಳಿ ನಡೆಸಿ, ಅವರು ತಮ್ಮ ಪಕ್ಷಕ್ಕೆ 'ಆಮ್ ಆದ್ಮಿ ಪಾರ್ಟಿ' (ಸಾಮಾನ್ಯ ವ್ಯಕ್ತಿಯ ಪಕ್ಷ) ಎಂದು ಹೆಸರಿಸಿದ್ದರೂ ಸಿಎಂ ಕೇಜ್ರಿವಾಲ್ ತಮ್ಮ ಬಂಗಲೆಗಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯ ಜನರು ಹತಾಶವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಹುಡುಕುತ್ತಿದ್ದಾಗ ಕೇಜ್ರಿವಾಲ್ ತಮ್ಮ ಬಂಗಲೆಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಅಜಯ್ ಮಾಕನ್ ಹೇಳಿದ್ದರು. ಈ ವಿಚಾರವಾಗಿ ಕೇಜ್ರಿವಾಲ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿತ್ತು.
ಕೇಜ್ರಿವಾಲ್ ಅವರ ನಿವಾಸ "ಶೀಶ್ ಮಹಲ್" ಅನ್ನು ಪಿಡಬ್ಲ್ಯೂಡಿ ಉಸ್ತುವಾರಿ ಸಚಿವರೊಂದಿಗೆ ಶಾಮೀಲಾಗಿ ನವೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ನವೀಕರಣ ನಿರ್ಮಾಣ ಕಾಮಗಾರಿಗೆ ಆರಂಭದಲ್ಲಿ 15-20 ಕೋಟಿ ರೂ. ಅಂದಾಜು ವೆಚ್ಚ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ಈ ಮೊತ್ತವನ್ನು ಹೆಚ್ಚಿಸಿ 53 ಕೋಟಿ ರೂ.ಗಳನ್ನು ನಿವಾಸಕ್ಕೆ ಖರ್ಚು ಮಾಡಲಾಗಿದೆ. ಇದು ಆರಂಭಿಕ ಅಂದಾಜಿಗಿಂತ ಮೂರು ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ : Wagner Group: ಯಾರೀತ ಪ್ರಿಗೊಜಿನ್? ಪುಟಿನ್ ವಿರುದ್ಧವೇ ದಂಗೆಯೆದ್ದ ವ್ಯಾಗ್ನರ್ ಸೇನೆ ಬಲ ಎಷ್ಟು?