ಮುಂಬೈ: ಅಂತಾರಾಷ್ಟ್ರೀಯ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುತ್ತಿದ್ದ ಜಾಲವನ್ನೂ ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ. ದೆಹಲಿ, ಗ್ರೇಟರ್ ನೋಯ್ಡಾ, ಲಕ್ನೋ - ಉತ್ತರ ಪ್ರದೇಶದ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಮಟ್ಟ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿವಿಧ ರಾಜ್ಯಗಳಲ್ಲಿ ಸೈಬರ್ ಅಪರಾಧಗಳನ್ನೂ ಬಹಿರಂಗಪಡಿಸಿದ್ದಾರೆ.
ಆರೋಪಿ ಲಖನೌ ಮೂಲದ ರಿಷಬ್ ಮನೀಶ್ ದುಬೆ (23)ಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 3 ಲ್ಯಾಪ್‌ಟಾಪ್, 40 ಸಿಮ್ ಕಾರ್ಡ್, 25 ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, 5 ಮೊಬೈಲ್ ಫೋನ್, 6 ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಹಣ ವರ್ಗಾವಣೆ ಮಾಡಿದ್ದ ವಿಕಾಸ್ ಯಾದವ್ ಎಂಬಾತನನ್ನೂ ಬಂಧಿಸಲಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಹೈದರಾಬಾದ್, ಮೀರತ್, ಸೈಬರಾಬಾದ್, ಗುರುಗ್ರಾಮ್ ಮತ್ತಿತರೆಡೆ ದೂರು ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ದಾದರ್ ನಿವಾಸಿ ಅನಿಲ್ ಶಿರಸಾಗರ (60) ಎಂಬುವರು ಮುಂಬೈ ಮಾಟುಂಗಾ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಕೋವಿಡ್‌ನಿಂದ ಕೆಲಸ ಕಳೆದುಕೊಂಡಿದ್ದ ಅನಿಲ್ ಅವರು ಕೆಲಸ ಹುಡುಕುತ್ತಿದ್ದರು. ನೌಕರಿ ಡಾಟ್ ಕಾಮ್ಗೆ ಆನ್‌ಲೈನ್‌ನಲ್ಲಿ ರೆಸ್ಯೂಮ್ ಕಳಿಸಿದ್ದರು. ಈ ವೇಳೆ ಅವರಿಗೆ ಮೊಬೈಲ್ ಸಂಖ್ಯೆ 7318241342, 7390935795 ಮತ್ತು 7897278126 ರಿಂದ ಕರೆಗಳು ಬಂದಿದ್ದವು. ಅನಿಲ್ ಅವರ ಸ್ವವಿವರ ನೋಡಿದ ನಂತರ ದುಬೈನ ಪೆಟ್ರೋಫೇ ಇಂಟರ್ನ್ಯಾಷನಲ್ ಕಂಪನಿಗೆ ತಾವು ಆಯ್ಕೆಯಾಗಿದ್ದಾಗಿ ಆರೋಪಿ ಇಮೇಲ್ ಕಳಿಸಿದ್ದನು.
ಆರೋಪಿಗಳು ಇಂಡಸ್‌ಇಂಡ್ ಬ್ಯಾಂಕ್ ಮೂಲಕ ವಿವಿಧ ಕಾರಣ ನೀಡಿ 1 ಲಕ್ಷ 78 ಸಾವಿರ ರೂಪಾಯಿಗಳನ್ನೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರವೂ ಹಣದ ಬೇಡಿಕೆ ಇಟ್ಟಿದ್ದರಿಂದ ಅನುಮಾನಗೊಂಡ ಅನಿಲ್ ಹಣ ವಾಪಸ್ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆರೋಪಿಗಳು ಹಣ ಕೊಡಲು ನಿರಾಕರಿಸಿದ್ದಾರೆ. ಆ ನಂತರ ಆರೋಪಿಗಳ ಎಲ್ಲ ಮೊಬೈಲ್ ನಂಬರ್‌ಗಳನ್ನು ಮಾಡಿರುವುದು ಕಂಡು ಬಂದಿದೆ. ಹೀಗಾಗಿ, ತಾನು ಮೋಸ ಹೋಗಿರುವುದನ್ನು ಅರಿತು ಅನಿಲ್ ಮಾಟುಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂಓದಿ: ಶ್ರದ್ಧಾ ವಾಕರ್ ಭೀಕರ ಹತ್ಯೆ: ಸೆಷನ್ಸ್ ಕೋರ್ಟ್ಗೆ ಪ್ರಕರಣ ವರ್ಗಾವಣೆ