ಜಲಗಾಂವ್ (ಮಹಾರಾಷ್ಟ್ರ): ಒಬಿಸಿ ಮೀಸಲಾತಿಯನ್ನು ಮುಟ್ಟದೆ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ನೀಡಬೇಕು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಒತ್ತಾಯಿಸಿದ್ದಾರೆ. ಜಲಗಾಂವ್ನಲ್ಲಿ ಮಾತನಾಡಿದ ಅವರು, ಮರಾಠ ಮೀಸಲಾತಿ ಸಮಸ್ಯೆಗೆ ಪರಿಹಾರೋಪಾಯವನ್ನು ನೀಡಿದ್ದಾರೆ. ಅಲ್ಲದೇ ಇದೇ ವೇಳೆ ಕೇಂದ್ರ ಸರ್ಕಾರ ಮರಾಠರ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮೀಸಲಾತಿಯ ವಿಚಾರ ಭುಗಿಲೆದ್ದಿದೆ. ಒಂದು ವೇಳೆ ಒಬಿಸಿ ಕೋಟಾದಲ್ಲಿ ಮರಾಠರಿಗೆ ಮೀಸಲಾತಿಯನ್ನು ನೀಡಿದರೆ ಸಮಸ್ಯೆ ಮತ್ತೆ ಹೆಚ್ಚಳವಾಗಲಿದೆ. ಆದ್ದರಿಂದ, ಜಲಗಾಂವ್ನಲ್ಲಿ ಒಬಿಸಿ ಮೀಸಲಾತಿಯನ್ನು ಮುಟ್ಟದೆ ಮರಾಠರಿಗೆ ಮೀಸಲಾತಿಯನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಒಬಿಸಿ ಮೀಸಲಾತಿ ಮುಟ್ಟಬೇಡಿ : ಜಲ್ನಾ ಮರಾಠ ಪ್ರತಿಭಟನಾಕಾರರ ಮೇಲೆ ಸರ್ಕಾರದಿಂದ ಲಾಠಿ ಚಾರ್ಜ್ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಒಂದು ವೇಳೆ ಮರಾಠ ಸಮುದಾಯಕ್ಕೆ ಒಬಿಸಿಯಿಂದ ಮೀಸಲಾತಿ ನೀಡಿದರೆ ಸಮಸ್ಯೆ ಮತ್ತೆ ಹೆಚ್ಚಾಗಲಿದೆ. ಆದ್ದರಿಂದ ಒಬಿಸಿಯ ಮೀಸಲಾತಿಯನ್ನು ಮುಟ್ಟದಂತೆ ತಿಳಿಸಿದ್ದಾರೆ. ಮೀಸಲಾತಿ ನೀಡುವಾಗ ಹಿಂದುಳಿದ ವರ್ಗಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದಿದ್ದಾರೆ. ಒಂದು ವೇಳೆ ಇಂತಹ ಪ್ರಯತ್ನ ನಡೆದರೆ ಎನ್ಸಿಪಿ ಯಾವುದೇ ನೆರವು ನೀಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.
ಸರ್ಕಾರದಿಂದ ಮರಾಠ ಸಮುದಾಯದ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ. ಸಚಿವಾಲಯದಿಂದ ಲಾಠಿ ಚಾರ್ಜ್ಗೆ ಆದೇಶಿಸಲಾಗಿದೆ ಎಂದು ದೂರಲಾಗಿದೆ. ಒಂದು ವೇಳೆ ಸರ್ಕಾರ ಲಾಠಿ ಚಾರ್ಜ್ ನಡೆಸಿಲ್ಲ ಎನ್ನುವುದಾದರೆ, ಯಾರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂಬುದನ್ನು ವಿವರಿಸಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಪೊಲೀಸರು-ಪ್ರತಿಭಟನಾಕಾರರ ನಡುವೆ ಘರ್ಷಣೆ: ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಜಲ್ನಾದ ಅಂತರವಾಲಿ ಸಾರಥಿ ಗ್ರಾಮದಲ್ಲಿ ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಜಾರಂಜ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಪೊಲೀಸರು ಪ್ರಯತ್ನಿಸಿದಾಗ ಘರ್ಷಣೆ ಪ್ರಾರಂಭವಾಗಿತ್ತು.
ಪ್ರತಿಭಟನಾಕಾರರು ಕಲ್ಲು ತೂರಾಟ ಆರಂಭಿಸಿದ್ದು, ಹಲವು ಪೊಲೀಸರಿಗೆ ಗಾಯಗಳಾಗಿತ್ತು. ಕೆಲವರು ರಾಜ್ಯ ಸಾರಿಗೆ ಬಸ್‌ಗಳು ಮತ್ತು ಖಾಸಗಿ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದ್ದರು. ಅಲ್ಲದೆ, ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಸ್ಥಳದಲ್ಲಿದ್ದವರು ಹೇಳಿದ್ದರು. ಆದರೆ, ಆ ಬಗ್ಗೆ ಅಧಿಕಾರಿಗಳು ಖಚಿತ ಮಾಹಿತಿಯನ್ನು ನೀಡಿಲ್ಲ. ಹಿಂಸಾಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ಪೊಲೀಸರು 300 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ವಿವಿಧೆಡೆ ಮರಾಠಾ ಮೀಸಲಾತಿಗೆ ಒತ್ತಾಯಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿವೆ. ಜಾಲನಾ ಜಿಲ್ಲೆಯ ಶಹಘಡ ಬಳಿ ನಡೆದ ಹೋರಾಟದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉದ್ರಿಕ್ತರ ಗುಂಪು ಧುಳೆ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದರು. ಇದನ್ನು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹೋರಾಟಗಾರರು ಹೆದ್ದಾರಿಯಲ್ಲಿ ಸಿಕ್ಕ ಸಿಕ್ಕ ಬಸ್ಗಳ ಮೇಲೆ ಕಲ್ಲು ತೂರಿದ್ದಾರೆ. ಪ್ರಯಾಣಿಕರು ಬಸ್ನಲ್ಲಿ ಇದ್ದಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ನೋಡ ನೋಡುತ್ತಿದ್ದಂತೆ ಆರು ಬಸ್‌ಗಳು ಧಗಧಗನೇ ಹೊತ್ತಿ ಉರಿದಿದ್ದವು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಮೀಸಲಾತಿ ಹೋರಾಟ: ಕರ್ನಾಟಕದ 2 ಬಸ್ ಸೇರಿ 6 ಬಸ್ಗಳಿಗೆ ಬೆಂಕಿ, 85 ಮಂದಿಗೆ ಗಾಯ