ಥಾಣೆ (ಮಹಾರಾಷ್ಟ್ರ) : ಮಹಾರಾಷ್ಟ್ರದ ಥಾಣೆಯಲ್ಲಿ ಲಿಫ್ಟ್ ಕುಸಿದು 6 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಥಾಣೆಯಲ್ಲಿನ ಹೈಲ್ಯಾಂಡ್ ಪಾರ್ಕ್ನಲ್ಲಿನ ನಾರಾಯಣಿ ಶಾಲೆಯ ಪಕ್ಕದಲ್ಲಿರುವ ರನ್ವಾಲ್ ಗಾರ್ಡನ್‌ನಲ್ಲಿ ಈ ದುರಂತ ಸಂಭವಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಅಗ್ನಿಶಾಮಕ ದಳ, ವಿಪತ್ತು ರಕ್ಷಣಾ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತರಲ್ಲಿ ಐವರು ಕಾರ್ಮಿಕರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಥಾಣೆಯ ಬಾಲ್ಕಮ್ ಪ್ರದೇಶದಲ್ಲಿ 40 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಎಲ್ಲ ಕೆಲಸಗಳು ಮುಗಿದು ಕ್ಯೂರಿಂಗ್ ಕೆಲಸ ನಡೆಯುತ್ತಿದೆ. ಇಂದು (ಭಾನುವಾರ) ಸಂಜೆ ಕಾರ್ಮಿಕರು ನೀರು ಹರಿಸಿ ಮೇಲಿನ ಅಂತಸ್ತಿನಿಂದ ಕೆಳಕ್ಕೆ ಲಿಫ್ಟ್‌ನಲ್ಲಿ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ಲಿಫ್ಟ್ ಇದ್ದಕ್ಕಿದ್ದಂತೆ ಕುಸಿದಿದೆ. ಇದರಿಂದ ಸ್ಥಳದಲ್ಲೇ 6 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಲಿಫ್ಟ್ ಏಕಾಏಕಿ ಕುಸಿದುಬಿದ್ದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಲಿಫ್ಟ್ನ ಸ್ಥಿತಿ ಮತ್ತು ಅದರಲ್ಲಿನ ತಾಂತ್ರಿಕ ದೋಷವನ್ನು ಪತ್ತೆ ಮಾಡಲಾಗುತ್ತಿದೆ.
ಈ ಹಿಂದೆ ಇಲ್ಲಿನ ಲೋವರ್ ಪ್ಯಾರಾಲ್‌ನಲ್ಲಿ ಟ್ರೇಡ್ ವರ್ಡ್ ಕಟ್ಟಡದ ಲಿಫ್ಟ್ ಕುಸಿದು ಎಂಟು ಜನರು ಗಾಯಗೊಂಡರು. ಘಟನೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗ್ಲೋಬಲ್ ಮತ್ತು ಮುನ್ಸಿಪಲ್ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರ್ಲ್ಡ್ ಟ್ರೇಡ್ 16 ಅಂತಸ್ತಿನ ಕಟ್ಟಡವಾಗಿದೆ. ಅಂದು ನಾಲ್ಕನೇ ಮಹಡಿಯಲ್ಲಿದ್ದ ಲಿಫ್ಟ್ ಕುಸಿದು 8 ಮಂದಿ ಗಾಯಗೊಂಡಿದ್ದರು. ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ಜೀವಗಳು ಉಳಿದಿದ್ದವು.
ಲಿಫ್ಟ್ ಬಳಕೆ ಬಗ್ಗೆ ಮಾಹಿತಿ: ಲಿಫ್ಟ್ ಬಳಸುವಾಗ ಎಚ್ಚರ ವಹಿಸುವುದು ಅನಿವಾರ್ಯ. ಹತ್ತುವಾಗ ಮತ್ತು ಇಳಿಯುವ ಮುನ್ನ ಲಿಫ್ಟ್ನ ಬಗ್ಗೆ ತಿಳಿದುಕೊಂಡಿರಬೇಕು. ಎಲಿವೇಟರ್ ಚಲಿಸುವಾಗ ಅದನ್ನು ನಿಲ್ಲಿಸಲು ಕೈಗಳನ್ನು ಅಥವಾ ಯಾವುದೇ ವಸ್ತುವನ್ನು ಬಳಸುವುದು ಅಪಾಯಕಾರಿ. ಲಿಫ್ಟ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿದ್ದರೆ ತಾಂತ್ರಿಕ ದೋಷದ ಅಪಾಯವಿರುತ್ತದೆ. ಆದ್ದರಿಂದ, ಲಿಫ್ಟ್‌ನಲ್ಲಿ ಜನಸಂದಣಿ ಉಂಟಾಗುವುದನ್ನು ತಪ್ಪಿಸಬೇಕು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಲಿಫ್ಟ್ ಬಳಸುವಾಗ ಅವರ ಪೋಷಕರು ಮಾರ್ಗದರ್ಶನ ನೀಡಬೇಕು.
ಇದನ್ನೂ ಓದಿ: ಚಿಕ್ಕಮಗಳೂರು: ಎತ್ತಿನಗಾಡಿ ಸ್ಪರ್ಧೆ ವೇಳೆ ನೊಗ ಬಡಿದು ಯುವಕ ಸಾವು