ಕೋಯಿಕ್ಕೋಡ್ (ಕೇರಳ): ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೋಯಿಕ್ಕೋಡ್ ಜಿಲ್ಲೆಯ ಕೂತಲಿ ಪಂಚಾಯತ್ ವ್ಯಾಪ್ತಿಯ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಸೋಮವಾರ(ಜು.10ರಂದು) ರಜೆ ನೀಡಲಾಗಿತ್ತು. ಎಇಒ (ಸಹಾಯಕ ಶಿಕ್ಷಣಾಧಿಕಾರಿ) ಮತ್ತು ಇತರ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷರು ತಿಳಿಸಿದರು. ಶಾಲೆಗಳು ಮಾತ್ರವಲ್ಲದೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳನ್ನು ಕೂಡಾ ನಿಲ್ಲಿಸಲಾಯಿತು.
ಕೂತಳ್ಳಿ ಪಂಚಾಯ್ತಿಯಿಂದ ಎಚ್ಚರಿಕೆ: ಭಾನುವಾರ (ಜು.9ರಂದು) ಸಂಜೆ ಕೂತಾಳಿ ಪಂಚಾಯಿತಿಯಲ್ಲಿ ಐವರಿಗೆ ಬೀದಿ ನಾಯಿಗಳು ಕಚ್ಚಿವೆ. ಈ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಕೂತಾಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಇದರೊಂದಿಗೆ ಪಂಚಾಯ್ತಿಯಲ್ಲಿ ಪ್ರಾಣಿಗಳ ಜನನ ನಿಯಂತ್ರಣ ಚಟುವಟಿಕೆಗಳೂ ವಿಫಲವಾಗಿವೆ.
ಈ ಪರಿಸ್ಥಿತಿಯಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಬಿಡಲು ಸಾಧ್ಯವಾಗದೇ ಶಾಲೆಗೆ ರಜೆ ಕೊಡಲಾಗಿದೆ. ಬೀದಿ ನಾಯಿಗಳ ದಾಳಿಯ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಅರಿವು ಮೂಡಿಸುವುದು ಈ ರಜೆಯ ಉದ್ದೇಶವಾಗಿದೆ ಎಂದು ಹೇಳುತ್ತಾರೆ ಪಂಚಾಯತ್ ಅಧ್ಯಕ್ಷರು. ಇದರೊಂದಿಗೆ ಕಳೆದ ಎರಡು ತಿಂಗಳಲ್ಲಿ ಕಣ್ಣೂರಿನಲ್ಲಿ ಬೀದಿ ನಾಯಿಗಳ ಗುಂಪು ದಾಳಿ ಮಾಡಿದ್ದರಿಂದ ಅನೇಕ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.
ಬೀದಿ ನಾಯಿಗಳಿಂದ ಮಕ್ಕಳ ಮೇಲೆ ದಾಳಿ ಪ್ರಕರಣಗಳು: ಕೋಯಿಕ್ಕೋಡ್ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಶಾಲೆಯಿಂದ ಹಿಂತಿರುಗುವಾಗ ಹಾಗೂ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಇತ್ತೀಚೆಗೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಇತ್ತೀಚೆಗೆ 2023ರ ಜೂನ್ 11ರಂದು ಕಣ್ಣೂರಿನಲ್ಲಿ 11 ವರ್ಷದ ನಿಹಾಲ್ ಎಂಬ ಮಗುವನ್ನು ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಸಾಯಿಸಿದ ಆಘಾತಕಾರಿ ಘಟನೆ ನಡೆದಿತ್ತು. ಕೊಟ್ಟಾಯಂ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆಯೊಂದು ಸಂಭವಿಸಿತ್ತು. ಕೇರಳದಲ್ಲಿ ಕಳೆದ ವರ್ಷ ಬೀದಿನಾಯಿ ದಾಳಿಯಿಂದ 12 ವರ್ಷದ ಅಪ್ರಾಪ್ತ ಬಾಲಕ ಸಾವನ್ನಪ್ಪಿದ್ದ ದುರ್ಘಟನೆ ಕೂಡಾ ನಡೆದಿತ್ತು.
ಬೀದಿನಾಯಿ ದಾಳಿ ಪ್ರಕರಣಗಳ ಅಂಕಿ - ಅಂಶ: ಕೇರಳ ರಾಜ್ಯದಲ್ಲಿ ನಾಯಿ ದಾಳಿ ಪ್ರಕರಣಗಳ ಬಗ್ಗೆ ದತ್ತಾಂಶವನ್ನು ಒದಗಿಸಿದ ಮಕ್ಕಳ ಹಕ್ಕುಗಳ ಸಂಸ್ಥೆ, ಬೀದಿ ನಾಯಿಗಳು ಜನರು ಅಥವಾ ಇತರ ಪ್ರಾಣಿಗಳ ಮೇಲೆ ದಾಳಿ ಮಾಡುವ ಮೂಲಕ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡಬಹುದು ಎಂದು ಹೇಳಿದೆ. 2019ರಲ್ಲಿ ಕೇರಳದಲ್ಲಿ 5,794 ಬೀದಿನಾಯಿ ದಾಳಿಗಳು ವರದಿಯಾಗಿವೆ. 2020ರಲ್ಲಿ 3,951ಕ್ಕೆ ಇಳಿದಿದೆ. 2021ರಲ್ಲಿ 7,927 ನಾಯಿ ದಾಳಿ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದೆ. ಆದರೆ, 2022ರಲ್ಲಿ 11,776 ಪ್ರಕರಣಗಳು ಹಾಗೂ 2023ರ ಜೂನ್ 19ರವರೆಗೆ 6,276 ಪ್ರಕರಣಗಳು ದಾಖಲಾಗಿವೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು: ನಾಲ್ಕು ವರ್ಷದ ಮಗುವಿನ ಮೇಲೆರಗಿದ ಜರ್ಮನ್ ಶಫರ್ಡ್ ಶ್ವಾನ; Video