ಮಧುರೈ: ತಮಿಳುನಾಡು ಮುಖ್ಯಮಂತ್ರಿಗಳಾಗಿದ್ದ ಜೆ.ಜಯಲಲಿತಾ ಮತ್ತು ಎಂ ಜಿ ರಾಮಚಂದ್ರನ್ ಅವರ ವಿಗ್ರಹವಿರುವ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರ ಚಿತ್ರಗಳನ್ನೂ ಇಡಲಾಗಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಈ ಹಿನ್ನೆಲೆ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ. ಈ ದೇವಾಲಯದಿಂದ ಜಯಲಲಿತಾ ಮಾಡಿದ ಧೈರ್ಯ ಮತ್ತು ತ್ಯಾಗಗಳನ್ನು ಜಗತ್ತಿಗೆ ಸಾರುವ ಉದ್ದೇಶ ಎಂದು ಕಂದಾಯ ಸಚಿವ ಆರ್ ಬಿ ಉದಯ ಕುಮಾರ್ ಮಾಹಿತಿ ನೀಡಿದ್ದಾರೆ.
ಸ್ಮಾರಕದೊಳಗಿರುವ ಬಿಜೆಪಿ ನಾಯಕರ ಫೋಟೋಗಳ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ದೇಶಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಜೆ ಪಿ ನಡ್ಡಾ ಆರೋಗ್ಯ ಸಚಿವರಾಗಿದ್ದಾಗ ಮಧುರೈನಲ್ಲಿ ಏಮ್ಸ್ ಆಸ್ಪತ್ರೆಯ ನಿರ್ಮಾಣ ನಡೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧುರೈಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಹಲವು ಸಂಗತಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಹೀಗಾಗಿ, ಇವರ ಫೋಟೋಗಳನ್ನು ಎಂ ಜಿ ರಾಮಚಂದ್ರನ್ ಮತ್ತು ಜಯಲಲಿತಾ ಅವರ ಸ್ಮಾರಕ ದೇವಸ್ಥಾನದಲ್ಲಿಡಲು ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.
ಜಯಲಲಿತಾ ಅವರು ಡಿಸೆಂಬರ್ 5,2016ರಂದು ಹೃದಯಾಘಾತದಿಂದ ನಿಧನರಾದರು ಮತ್ತು ಎಂಜಿಆರ್ 1987ರ ಡಿಸೆಂಬರ್ 24ರಂದು ನಿಧನರಾದರು. ಈ ಸ್ಮಾರಕವನ್ನು ಜನವರಿಯಲ್ಲಿ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ತಿರುಮಂಗಲಂ ಬಳಿಯ ಟಿ ಕುನಾಥೂರಿನಲ್ಲಿ 12 ಎಕರೆ ಜಾಗದಲ್ಲಿ ಇದನ್ನು ನಿರ್ಮಿಸಲಾಗಿದೆ.