ಶಿಲ್ಲಾಂಗ್: ಮೇಘಾಲಯ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಮಂಗಳವಾರ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಫಾಗು ಚೌಹಾಣ್ ಪ್ರಮಾಣ ವಚನ ಬೋಧಿಸಿದರು. ಕಾನ್ರಾಡ್ ಸಂಗ್ಮಾ ಅವರ ಮೈತ್ರಿಕೂಟದಲ್ಲಿ ಬಿಜೆಪಿ ಅತ್ಯಂತ ಚಿಕ್ಕ ಪಾಲುದಾರ ಪಕ್ಷವಾದರೂ, ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಪಸ್ಥಿತರಿದ್ದರು.
ನ್ಯಾಷನಲ್ ಪೀಪಲ್ಸ್ ಪಾರ್ಟಿ ಪ್ರೆಸ್ಟೋನ್ ಟೈನ್ಸಾಂಗ್ ಮತ್ತು ಸ್ನಿಯಾವ್ಭಾಲಾಂಗ್ ಧಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಅಲೆಕ್ಸಾಂಡರ್ ಲಾಲೂ ಹೆಕ್, ಯುಡಿಪಿಯ (ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ) ಪಾಲ್ ಲಿಂಗ್ಡೋಹ್ ಮತ್ತು ಕಿರ್ಮೆನ್ ಶೈಲ್ಲಾ ಮತ್ತು ಎಚ್‌ಎಸ್‌ಪಿಡಿಪಿಯ (ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಶಕ್ಲಿಯಾರ್ ವಾರ್ಜ್ರಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟಾರೆಯಾಗಿ ಎನ್‌ಪಿಪಿಯಿಂದ 7, ಯುಡಿಪಿಯಿಂದ ಇಬ್ಬರು ಮತ್ತು ಬಿಜೆಪಿ ಹಾಗೂ ಎಚ್ಎಸ್ಪಿಡಿಪಿ ತಲಾ ಒಬ್ಬರು ಕ್ಯಾಬಿನೆಟ್ ಸೇರ್ಪಡೆಯಾಗಿದ್ದಾರೆ.
ಹಿಂದಿನ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಸರ್ಕಾರದಲ್ಲಿ ಎನ್‌ಪಿಪಿಯ ಪಾಲುದಾರ ಪಕ್ಷಗಳಾದ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಪಿಡಿಎಫ್) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) ಕಾನ್ರಾಡ್ ಸಂಗ್ಮಾ ಅವರನ್ನು ಬೆಂಬಲಿಸಿವೆ. ಹೀಗಾಗಿ ಕಾನ್ರಾಡ್ ಸಂಗ್ಮಾ ಬೆಂಬಲಿಗರ ಒಟ್ಟು ಸಂಖ್ಯೆ 45 ಕ್ಕೆ ಏರಿಕೆಯಾಗಿದೆ. ಚುನಾವಣೆಯಲ್ಲಿ ಯುಡಿಪಿ 11 ಮತ್ತು ಪಿಡಿಎಫ್ ಎರಡು ಸ್ಥಾನಗಳನ್ನು ಗೆದ್ದಿವೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಈ ಹಿಂದೆಯೇ ಸಂಗ್ಮಾಗೆ ಬೆಂಬಲ ಘೋಷಿಸಿತ್ತು. ಅಲ್ಲದೆ ಸಂಗ್ಮಾ ಅವರ ಮೈತ್ರಿಕೂಟವು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಇಬ್ಬರು ಶಾಸಕರು ಮತ್ತು ಇಬ್ಬರು ಸ್ವತಂತ್ರ ಶಾಸಕರ ಬೆಂಬಲವನ್ನು ಸಹ ಹೊಂದಿದೆ. ಈ ಚುನಾವಣೆಯಲ್ಲಿ ಸಂಗ್ಮಾ ಅವರ ಎನ್‌ಪಿಪಿ 26 ಸ್ಥಾನಗಳನ್ನು ಗೆದ್ದಿದೆ. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ ಸಂಸದೀಯ ಪಕ್ಷದ ಪರವಾಗಿ ನಾನು ಈ ಮೂಲಕ ಸರ್ಕಾರ ರಚನೆಗೆ ಬೆಂಬಲವನ್ನು ನೀಡುತ್ತೇನೆ ಎಂದು ಯುಡಿಪಿ ಮುಖ್ಯಸ್ಥ ಮೆಟ್ಬಾ ಲಿಂಗ್ಡೋಹ್ ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಪಿಡಿಎಫ್ ಕಾರ್ಯಾಧ್ಯಕ್ಷ ಬಂಟೆಡೋರ್ ಲಿಂಗ್ಡೋಹ್ ಮತ್ತು ಅಧ್ಯಕ್ಷ ಗೇವಿನ್ ಮೈಲ್ಲಿಮ್‌ಂಗಪ್ ಕೂಡ ಸಂಗ್ಮಾ ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ಪತ್ರವನ್ನು ನೀಡಿದರು. ಸರ್ಕಾರ ರಚಿಸಲು ಎನ್‌ಪಿಪಿ ಬೆಂಬಲಿಸಿದ್ದಕ್ಕಾಗಿ ಯುಡಿಪಿ ಮತ್ತು ಪಿಡಿಎಫ್‌ಗೆ ಧನ್ಯವಾದಗಳು. ಸ್ಥಳೀಯ ರಾಜಕೀಯ ಪಕ್ಷಗಳ ಬೆಂಬಲವು ಮೇಘಾಲಯ ಮತ್ತು ಇಲ್ಲಿನ ಜನರಿಗೆ ಸೇವೆ ಸಲ್ಲಿಸಲು ನಮ್ಮನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಂಗ್ಮಾ ಹೇಳಿದ್ದಾರೆ.
ಶನಿವಾರದಂದು ಡಿ. ಶಿರಾ ಇವರು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. 59 ಸದಸ್ಯರನ್ನು ಹೊಂದಿರುವ ಹೊಸ ಸದನವನ್ನು ಮಾರ್ಚ್ 6 ರಂದು ಮೊದಲ ಅಧಿವೇಶನದ ನಂತರ ಮುಂದೂಡಲಾಗುವುದು ಎಂದು ವಿಧಾನಸಭೆ ಸಚಿವಾಲಯ ತಿಳಿಸಿದೆ. ಸಭಾಧ್ಯಕ್ಷರನ್ನು ಆಯ್ಕೆ ಮಾಡಲು ವಿಧಾನಸಭೆ ಮಾರ್ಚ್ 9 ರಂದು ಮತ್ತೆ ಸಭೆ ಸೇರಲಿದೆ.
ಇದನ್ನೂ ಓದಿ : ಬಿಜೆಪಿಯಲ್ಲಿದ್ದೇನೆ, ಬೀಫ್ ತಿನ್ನುತ್ತೇನೆ: ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ