ನವದೆಹಲಿ: ಕಳುವಾದ ಪುರಾತನ ವಸ್ತುಗಳನ್ನು ಮರಳಿ ದೇಶಕ್ಕೆ ತರುವ ಪ್ರಯತ್ನದ ನಡುವೆ ಇನ್ನೂ 486 ಐತಿಹಾಸಿಕ ವಸ್ತುಗಳು ಮಾಯವಾಗಿವೆ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ. ಅದರಲ್ಲೂ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಪುರಾತನ ವಸ್ತುಗಳು ಕಾಣೆಯಾಗಿವೆ ಎಂದು ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೀಡಿದ ಅಂಕಿಅಂಶದಲ್ಲಿ ಗೊತ್ತಾಗಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದಿಂದ 125, ರಾಜಸ್ಥಾನದಲ್ಲಿ 93 ಮತ್ತು ಉತ್ತರ ಪ್ರದೇಶದಲ್ಲಿ 86 ವಸ್ತುಗಳು ಕಳ್ಳತನವಾಗಿದೆ. 19 ರಾಜ್ಯಗಳು ಮತ್ತು ಕೇಂದ್ರಾಡಳಿಯ ಪ್ರದೇಶಗಳಿಂದ ಒಟ್ಟಾರೆ 486 ಪುರಾತನ ವಸ್ತುಗಳು ಕಳ್ಳತನ ಮಾಡಲಾಗಿದೆ. ಇವುಗಳಲ್ಲಿ ಸದ್ಯಕ್ಕೆ 91 ಮರಳಿ ಪಡೆಯಲಾಗಿದೆ ಎಂದು ದಾಖಲೆಗಳಲ್ಲಿದೆ.
ಎಲ್ಲೆಲ್ಲಿ ಕಳವು? : ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಪುರಾತತ್ವ ತಾಣಗಳ (ಎಎಸ್‌ಐ) ಸಂರಕ್ಷಿತ ಸ್ಮಾರಕಗಳು ಮತ್ತು ಸ್ಥಳಗಳಿಂದ ಪ್ರಾಚೀನ ವಸ್ತುಗಳನ್ನು ಕಳವು ಮಾಡಲಾಗಿದೆ. ಇದರಲ್ಲಿ ಹೆಚ್ಚಾಗಿ ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನದಲ್ಲಿ ಕಳುವಾಗಿದ್ದು, ಆ ಪೈಕಿ ಕ್ರಮವಾಗಿ 29, 11, 23 ಕದ್ದ ಪುರಾತನ ವಸ್ತುಗಳನ್ನು ಹಿಂಪಡೆಯಲಾಗಿದೆ.
ರಾಜ್ಯ ಸರ್ಕಾರಗಳು ಮತ್ತು ಪುರಾತತ್ವ ಸ್ಮಾರಕಗಳನ್ನು ನೋಡಿಕೊಳ್ಳಲು ಇರುವ ಖಾಸಗಿ ಏಜೆನ್ಸಿಗಳು ಪ್ರಾಚೀನ ವಸ್ತುಗಳ ಕಳ್ಳತನದ ಮಾಹಿತಿಯನ್ನು ASIಯೊಂದಿಗೆ ಹಂಚಿಕೊಳ್ಳದಿರುವುದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವನ್ನು ಚಿಂತೆಗೀಡು ಮಾಡಿದೆ. ಇದಕ್ಕೂ ಮಿಗಿಲಾಗಿ, ಎಎಸ್‌ಐ ಅಡಿಯಲ್ಲಿ ಸಂಗ್ರಹಾಲಯಗಳಿಂದ ಪ್ರಾಚೀನ ವಸ್ತುಗಳ ಕಳ್ಳತನವನ್ನು ಪತ್ತೆಹಚ್ಚಲು ಯಾವುದೇ ಮೀಸಲು ಮೇಲ್ವಿಚಾರಣಾ ಪಡೆ ಇಲ್ಲವಾಗಿದ್ದು, ಕಳ್ಳತನದ ಮಾಹಿತಿಯೇ ಸಿಗುವುದಿಲ್ಲ.
ಪ್ರತ್ಯೇಕ ಕಾವಲು ಪಡೆ ಇಲ್ಲ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಐತಿಹಾಸಿಕ ಸ್ಮಾರಕಗಳು, ಮ್ಯೂಸಿಯಂಗಳಲ್ಲಿ ಎಎಸ್‌ಐನ ಪ್ರತ್ಯೇಕ ಭದ್ರತಾ ಸಿಬ್ಬಂದಿ ಇಲ್ಲ. ಖಾಸಗಿ ಭದ್ರತಾ ಸಿಬ್ಬಂದಿ, ರಾಜ್ಯ ಪೊಲೀಸ್ ಸಶಸ್ತ್ರ ಗಾರ್ಡ್‌ಗಳು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಸಿಬ್ಬಂದಿಯನ್ನು ಕಳ್ಳತನ ನಡೆದ ಸ್ಥಳಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ನಿಯೋಜಿಸಲಾಗಿದೆ ಎಂದರು.
ಎಎಸ್ಐನಿಂದ ಸಂರಕ್ಷಿತ ಸ್ಮಾರಕಗಳು, ಪ್ರದೇಶಗಳು ಅಥವಾ ವಸ್ತುಸಂಗ್ರಹಾಲಯಗಳಲ್ಲಿ ಪುರಾತನ ವಸ್ತುಗಳು ಕಳ್ಳತನವಾದರೆ, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ. ಕಸ್ಟಮ್ಸ್ ಇಲಾಖೆ ಸೇರಿದಂತೆ ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ಲುಕ್‌ಔಟ್ ನೋಟಿಸ್ ನೀಡಲಾಗುತ್ತದೆ. ಸಿಬಿಐ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಪೊಲೀಸರಿಗೆ ಕದ್ದ ಪುರಾತನ ವಸ್ತುಗಳನ್ನು ಪತ್ತೆಗೆ ಸೂಚಿಸಲಾಗುತ್ತದೆ. 2018 ರಿಂದ ಇಲ್ಲಿಯವರೆಗೆ ಎಎಸ್‌ಐ ಮೂರು ಲುಕ್ ಔಟ್ ನೋಟಿಸ್‌ಗಳನ್ನು ಮಾತ್ರ ಹೊರಡಿಸಿದೆ ಎಂದು ಅವರು ಮಾಹಿತಿ ನೀಡಿದರು.
ಮಾಹಿತಿ ಇಲ್ಲವಾದ್ರೆ ವಾಪಸ್ ಕಷ್ಟ: ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಡಿಯಲ್ಲಿ ಬರುವ 3,695 ಕೇಂದ್ರೀಯ ಸಂರಕ್ಷಿತ ಸ್ಮಾರಕಗಳು ಮತ್ತು ಪ್ರದೇಶಗಳಲ್ಲಿ 83 ಸ್ಮಾರಕಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕದಿಯಲ್ಪಟ್ಟ ವಸ್ತುಗಳ ಬಗ್ಗೆ ಸಾಕಷ್ಟು ಪುರಾವೆಗಳು ಇದ್ದಲ್ಲಿ ಅವುಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ. ಒಂದೊಮ್ಮೆ, ಕಳ್ಳತನವಾದ ವಸ್ತುಗಳ ಬಗ್ಗೆ ಮಾಹಿತಿ ಇಲ್ಲದೇ ಹೋದಲ್ಲಿ ಅವುಗಳನ್ನು ವಾಪಸ್ ಪಡೆಯುವುದು ಕಷ್ಟ ಎಂದು ಅಧಿಕಾರಿ ತಿಳಿಸಿದರು.
ಚಾಲ್ತಿಯಲ್ಲಿ ವಸ್ತುಗಳ ವಾಪಸ್ ಪ್ರಕ್ರಿಯೆ: ದಾಖಲೆಗಳ ಕೊರತೆಯಿಂದಾಗಿ ವಿವಿಧ ದೇಶಗಳಲ್ಲಿರುವ ಭಾರತದ ಪ್ರಾಚೀನ ವಸ್ತುಗಳ ಹಿಂಪಡೆಯುವಿಕೆ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ದೇಶಾದ್ಯಂತ ಎಎಸ್‌ಐನ 55 ಮ್ಯೂಸಿಯಂಗಳಲ್ಲಿ ದಾಖಲಾತಿಯನ್ನು ಪ್ರಾರಂಭಿಸಲಾಗಿದೆ. ಈ ವರ್ಷಾಂತ್ಯಕ್ಕೆ ಅದು ಪೂರ್ಣಗೊಳ್ಳುತ್ತದೆ. ಅಮೆರಿಕದಿಂದ 31, ಆಸ್ಟ್ರೇಲಿಯಾದಿಂದ 8, ಸಿಂಗಾಪುರ 17, ಇಂಗ್ಲೆಂಡ್ನಿಂದ 9, ಆಸ್ಟ್ರೇಲಿಯಾದಿಂದ ಎಂಟು ಮತ್ತು ಸ್ವಿಟ್ಜರ್ಲೆಂಡ್, ಬಾಂಗ್ಲಾದೇಶ, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‌ಲ್ಯಾಂಡ್ಸ್ ಮತ್ತು ಸಿಂಗಾಪುರದಿಂದ ತಲಾ ಒಂದು ಪುರಾತನ ಕಲಾಕೃತಿಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: GST: ಪಿಜಿ, ಹಾಸ್ಟೆಲ್ ಸೌಕರ್ಯಗಳ ಮೇಲೆ ಶೇ 12 ಜಿಎಸ್‌ಟಿ ಅನ್ವಯ: ಎಎಆರ್