ವಿಜಯವಾಡ: ಗಂಡ ಎರಡನೇ ಮದುವೆ ಆಗಿದ್ದಾನೆಂಬ ಮಾಹಿತಿ ತಿಳಿದು ಪತ್ನಿ ನದಿಗೆ ಹಾರಿರುವ ಘಟನೆ ಕನಕದುರ್ಗಮ್ಮ ಬ್ರಿಡ್ಜ್ ಬಳಿ ನಡೆದಿದೆ.
ಯನಮಲಕುದುರಿನ ಮಾರ್ಕಂಡೇಯ ನಗರದ ನಿವಾಸಿ ಪದ್ಮ (28) ತನ್ನ ಪತಿಗೆ ಇನ್ನೊಂದು ಮದುವೆಯಾಗಿದೆ ಎಂದು ಮಾಹಿತಿ ಪಡೆದಿದ್ದಾಳೆ. ಇದನ್ನು ಜೀರ್ಣಿಸಿಕೊಳ್ಳದ ಪದ್ಮಾ ನೇರ ಕನಕದುರ್ಗಮ್ಮ ಸೇತುವೆ ಬಳಿ ಬಂದು ಕೃಷ್ಣಾ ನದಿಗೆ ಹಾರಿದ್ದಾಳೆ.
ಇದನ್ನು ಗಮನಿಸಿ ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೋತ್ತಿಗಾಗಲೇ ಅಲ್ಲೇ ಇದ್ದ ಯುವಕರು ನದಿಗೆ ಹಾರಿ ಆಕೆಯನ್ನು ನೀರಿನಿಂದ ಹೊರ ತಂದಿದ್ದಾರೆ. ಬಳಿಕ ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಪೊಲೀಸರು ಮತ್ತು ಯುವಕರು ಸೇರಿ ಅರ್ಧ ಕಿ.ಮೀವರೆಗೆ ಹೊತ್ತೊಯ್ದು ಆಟೋದ ಮೂಲಕ ಆಸ್ಪತ್ರೆಗೆ ದಾಖಲಿಸಲಾಯ್ತು.
ಪ್ರಜ್ಞೆ ಬಂದ ನಂತರ ಆತ್ಮಹತ್ಯೆ ಯತ್ನದ ಕುರಿತು ಪದ್ಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನನ್ನ ಗಂಡ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ನನಗೆ ತಿಳಿಯಿತು. ಹೀಗಾಗಿ ನಾನು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಪದ್ಮಾ ಮಾಹಿತಿ ನೀಡಿದ್ದಾರೆ. ಪದ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರಿತು ಆಕೆಯ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ಮುಟ್ಟಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಪ್ರಗತಿಯಲ್ಲಿದೆ.