ಆನಂದ್ (ಗುಜರಾತ್): ಮದುವೆ ಹೆಸರಲ್ಲಿ ವಂಚನೆ ಯಾರೂ ಕೇಳಿರದ ಸಂಗತಿಯಲ್ಲದೇ ಇರಬಹುದು. ಆದರೆ, ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಮದುವೆ ಪ್ರಮಾಣಪತ್ರ ವಿತರಣೆಯಲ್ಲಿಯೂ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಇಡೀ ಗ್ರಾಮದ ಜನಸಂಖ್ಯೆಯೇ ಸುಮಾರು 1,500 ಇದ್ದರೆ, ಆ ಗ್ರಾಮದಲ್ಲಿ ವಿತರಣೆಯಾದ ಒಟ್ಟಾರೆ ಮದುವೆ ಪ್ರಮಾಣಪತ್ರಗಳ ಸಂಖ್ಯೆ 1,470!.
ಇಂತಹದ್ದೊಂದು ಮದುವೆ ಪ್ರಮಾಣಪತ್ರಗಳ ಹಗರಣ ರೇಲಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಈ ಸಂಬಂಧ ಪ್ರಾಥಮಿಕ ತನಿಖೆ ಆಧಾರದ ಮೇಲೆ ಈಗಾಗಲೇ ಪಂಚಾಯಿತಿಯ ಕಾರ್ಯದರ್ಶಿ ಅರವಿಂದ್ ಮಾಕ್ವಾನ ಎಂಬವವರನ್ನು ಅಮಾನತುಗೊಳಿಸಲಾಗಿದೆ.
ಮೊಬೈಲ್ಗೆ ಪ್ರಮಾಣಪತ್ರ ಹೋಗುತ್ತಿತ್ತು: ಮದುವೆ ಪ್ರಮಾಣಪತ್ರಗಳನ್ನು ಆಯಾ ಗ್ರಾಮದ ನಿವಾಸಿಗಳಿಗೆ ಮಾತ್ರವೇ ವಿತರಿಸಲು ಪಂಚಾಯಿತಿ ಕಾರ್ಯದರ್ಶಿಗೆ ಅವಕಾಶವಿದೆ. ಆದರೆ, ಹಣ ಕೊಡಲು ಸಿದ್ಧರಿದ್ದರೆ ಅವರಿಗೆ ಈ ಪ್ರಮಾಣಪತ್ರಗಳು ದೊರೆಯುತ್ತಿದ್ದವು. ಅಲ್ಲದೇ, ಮೊಬೈಲ್ಗೆ ಮದುವೆ ಪ್ರಮಾಣಪತ್ರಗಳು ರವಾನೆಯಾಗುತ್ತಿದ್ದವು.
ಏಜೆಂಟ್‌ಗಳ ಮೂಲಕ ಅಂತಹ ಪ್ರಮಾಣಪತ್ರಗಳನ್ನು ಪಂಚಾಯಿತಿಯ ಕಾರ್ಯದರ್ಶಿ ವಿತರಿಸುತ್ತಿದ್ದರು. ಜೊತೆಗೆ ಯಾವುದೇ ವಿವಾಹದ ಪುರಾವೆ ಅಥವಾ ದಂಪತಿ ಮಾಹಿತಿಯ ದಾಖಲೆಗಳಿಲ್ಲದೆ ಇದ್ದರೂ ಪ್ರಮಾಣಪತ್ರ ಕೊಡುತ್ತಿದ್ದರು. ಮೆಹ್ಸಾನಾ, ಅಹಮದಾಬಾದ್ ಮತ್ತು ಮುಂಬೈಯಂತಹ ಜಿಲ್ಲೆಗಳಲ್ಲಿ ವಾಸಿಸುವ ಹದಿಹರೆಯದವರ ಹೆಸರಿನಲ್ಲೂ ಮದುವೆ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಒಂದು ಪ್ರಮಾಣಪತ್ರಕ್ಕಾಗಿ 5 ರಿಂದ 10 ಲಕ್ಷ ರೂ. ಪಡೆಯಲಾಗುತ್ತಿತ್ತು ಎಂದು ಹೇಳಲಾಗಿದೆ.
ಕಳೆದ ಜುಲೈನಲ್ಲಿ ಸಭೆಯಲ್ಲಿ ನಕಲಿ ಪ್ರಮಾಣಪತ್ರಗಳ ದಂಧೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ರೇಲಾ ಗ್ರಾಮ ಪಂಚಾಯಿತಿಯಲ್ಲಿ 1,470 ಮದುವೆ ಪ್ರಮಾಣಪತ್ರಗಳ ವಿತರಣೆಯಾಗಿವೆ. ಈ ಗ್ರಾಮದಲ್ಲಿರುವ ಜನಸಂಖ್ಯೆ ಕೇವಲ 1,500 ಎಂದು ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ) ಗಮನಕ್ಕೆ ತರಲಾಗಿತ್ತು. ಆಗ ಈ ಅಧಿಕಾರಿ ಪಂಚಾಯಿತಿಯ ಕಾರ್ಯದರ್ಶಿ ವಿರುದ್ಧ ತನಿಖೆಗೆ ಕೈಗೊಂಡಿದ್ದರು ಎಂದು ಸೋಜಿತ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪುನಂಭಾಯ್ ಪರ್ಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆ ನಾಟಕವಾಡಿ ಗಂಡನ ಮನೆಯಿಂದ ನಗ, ನಾಣ್ಯ ದೋಚುವ ಚೆಲುವೆ: 31ನೇ ಶಾದಿಯಲ್ಲಿ ಸೆರೆ