ಜಮ್ಶೆಡ್‌ಪುರ(ಜಾರ್ಖಂಡ್): ಹೊಸ ವರ್ಷದ ಬೆಳಿಗ್ಗೆ ಜಮ್‌ಶೆಡ್‌ಪುರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಟಾಟಾ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಸ್ತುಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
ಆರ್‌ಐಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲವರು ಕಾರಿನಲ್ಲಿ ಪಿಕ್‌ನಿಕ್‌ಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಬಿಸ್ತುಪುರ್ ಸರ್ಕ್ಯೂಟ್ ಹೌಸ್ ವೃತ್ತದ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಸೂರಜ್ ಸಾಹು, ತುಕ್ತುಕ್, ಶುಭಂ, ಮೋನು, ಹೇಮಂತ್ ಮತ್ತು ಛೋಟು ಯಾದವ್ ಎಂದ ಗುರುತಿಸಲಾಗಿದೆ. ಹರ್ಷ್ ಝಾ ಮತ್ತು ರವಿ ಝಾ ಗಾಯಾಳುಗಳು ಎಂದು ತಿಳಿದುಬಂದಿದೆ. ಆದಿತ್ಯಪುರದ ಆರ್‌ಐಟಿಯ ಬಾಬಾ ಆಶ್ರಮದಲ್ಲಿ ಶೋಕ ಮಡುಗಟ್ಟಿದೆ.
ಇದನ್ನೂ ಓದಿ: ಡಂಪರ್-ಬಸ್ ಮಧ್ಯೆ ಡಿಕ್ಕಿ, ಧಗಧಗನೇ ಉರಿದ ವಾಹನಗಳು, 12 ಜನ ಸಜೀವದಹನ
ಆಂಧ್ರಪ್ರದೇಶದಲ್ಲಿ ಮೂವರು ಸಾವು: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲೂ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಸ್ತವರಿಪೇಟೆ ತಾಲೂಕಿನ ಚೆಟ್ಟಿಚಾರ್ಲ ಬಳಿ ಬೊಲೆರೋಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ, ಬೊಲೆರೋ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸಲು ಪಾಪೈಪಲ್ಲಿಯಿಂದ ಗಿಡ್ಡಲೂರು ಕಡೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತರನ್ನು ಪಿಕ್ಕಲಿ ರಾಹುಲ್ (21), ನಲ್ಲಬೋಟುಲ ಪವನ್ (21) ಮತ್ತು ಪಾಪೈಪಲ್ಲಿಯ ಗುಜ್ಜುಲ ಶ್ರೀನಿವಾಸ್ (20) ಎಂದು ಗುರುತಿಸಲಾಗಿದೆ. ಈ ಅಪಘಾತದ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.