ಪಾಟ್ನಾ( ಬಿಹಾರ): ಬಿಹಾರದ ಲಖಿಸರೈ ಜಿಲ್ಲೆಯಲ್ಲಿ ನಿನ್ನೆ ಸಂಜೆ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಅನೇಕ ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖಿಸರೈ ಎಸ್ಪಿ ಸುಶೀಲ್ ಕುಮಾರ್ ಸೂಚನೆ ಮೇರೆಗೆ ಕಳೆದ ಹಲವು ದಿನಗಳಿಂದ ನಕ್ಸಲೀಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಮಂಗಳವಾರ ಸಂಜೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಜಮಾಲಪುರದ ಭೀಮಾ ಅಣೆಕಟ್ಟು ಮತ್ತು ಕಜ್ರಾ, ಅಭಯಪುರ, ಲಖಿಸರೈನ ಪಿರಿ ಬಜಾರ್‌ನ ದಟ್ಟವಾದ ಕಾಡುಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಎಸ್‌ಎಸ್‌ಬಿಯ ಬೆಟಾಲಿಯನ್ -32 ಮತ್ತು ಬಿಎಸ್‌ಎಫ್ ಮತ್ತು ಪ್ಯಾರಾ ಮಿಲಿಟರಿ ಫೋರ್ಸ್‌ನ ಉನ್ನತ ಕಮಾಂಡರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಲಖಿಸರೈನ ಪಿರಿ ಬಜಾರ್ ಎನ್ಕೌಂಟರ್ ಸ್ಥಳದಲ್ಲಿ ಭದ್ರತಾ ಪಡೆಗಳು ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಲಖಿಸರೈ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಕುಮಾರ್ ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಪಿರಿ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾಳಿ ಅಣೆಕಟ್ಟಿನ ಬಳಿಯ ಅಮರಸಾನಿ ಅರಣ್ಯದ ಬಳಿ ನಕ್ಸಲರು ಅಡಗಿರುವ ಮಾಹಿತಿ ದೊರೆತ ಹಿನ್ನೆಲೆ ಈ ಪ್ರದೇಶವನ್ನು ಸೈನಿಕರು ಸುತ್ತುವರೆದಿದ್ದರು. ಈ ವೇಳೆ ನಕ್ಸಲರು ಗುಂಡು ಹಾರಿಸಲು ಆರಂಭಿಸಿದ್ದು, ಪ್ರತೀಕಾರವಾಗಿ ಸೈನಿಕರು ಪ್ರತಿದಾಳಿ ಮಾಡಿದ್ದಾರೆ. ಇದರಲ್ಲಿ ಅನೇಕ ನಕ್ಸಲೀಯರು ಎನ್ಕೌಂಟರ್ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.