ನೋಯ್ಡಾ: ನೋಯ್ಡಾ ಮೂಲದ ಔಷಧ ಸಂಸ್ಥೆ ಮರಿಯನ್ ಬಯೋಟೆಕ್‌ನ ಕೆಮ್ಮಿನ ಸಿರಪ್ ಡಾಕ್ -1 ಅನ್ನು ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಮತ್ತು ರಾಜ್ಯ ಅಧಿಕಾರಿಗಳು ತನಿಖೆ ನಡೆಸಿ ಈಗಾಗಲೇ ವರದಿ ನೀಡಿದ್ದಾರೆ. ಇದೀಗ ಕೇಸ್ಗೆ ಸಂಬಂಧಪಟ್ಟಂತೆ ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ಉತ್ತರ ಪ್ರದೇಶದ ಅಧಿಕಾರಿಗಳು ಬುಧವಾರ ರದ್ದುಗೊಳಿಸಿದ್ದಾರೆ.
"ಸಂಸ್ಥೆಯ ಪರವಾನಗಿಯನ್ನು ಜನವರಿಯಿಂದ ಅಮಾನತುಗೊಳಿಸಲಾಗಿದ್ದು, ಆ ಬಳಿಕ ವಿಚಾರಣೆ ಪ್ರಾರಂಭಿಸಲಾಗಿದೆ. ಜೊತೆಗೆ, ಸಂಸ್ಥೆಯ ಪರವಾನಗಿಯನ್ನು ಉತ್ತರ ಪ್ರದೇಶ ಡ್ರಗ್ಸ್ ಕಂಟ್ರೋಲಿಂಗ್ ಮತ್ತು ಲೈಸನ್ಸಿಂಗ್ ಪ್ರಾಧಿಕಾರ ರದ್ದುಗೊಳಿಸಿದೆ. ಹಾಗಾಗಿ, ಮರಿಯನ್ ಬಯೋಟೆಕ್ ಇನ್ನು ಮುಂದೆ ಸಿರಪ್ ತಯಾರಿಸಲು ಸಾಧ್ಯವಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಾರ್ಚ್ 3 ರಂದು ನೋಯ್ಡಾ ಪೊಲೀಸರು ಮರಿಯನ್ ಬಯೋಟೆಕ್‌ನ ಮೂವರು ಉದ್ಯೋಗಿಗಳನ್ನು ಸೆಕ್ಟರ್ 67 ರಲ್ಲಿ ಬಂಧಿಸಿದ್ದರು. ಇವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸಂಸ್ಥೆಯ ಇಬ್ಬರು ನಿರ್ದೇಶಕರಿಗೆ ಲುಕ್‌ಔಟ್ ನೋಟಿಸ್ ನೀಡಲಾಯಿತು. ಇಲ್ಲಿನ ಔಷಧಗಳ ಮಾದರಿಗಳು "ಕಲಬೆರಕೆ" ಮತ್ತು ಕಳಪೆ ಗುಣಮಟ್ಟ ಹೊಂದಿದೆ ಎಂದು ತನಿಖೆಯಿಂದ ಬಯಲಾಗಿದೆ. ಮಾದರಿಗಳನ್ನು ಚಂಡೀಗಢದಲ್ಲಿರುವ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕಳುಹಿಸಿದ ಎಲ್ಲಾ ಮಾದರಿಯಲ್ಲಿ 22 ಪ್ರಮಾಣಿತ ಗುಣಮಟ್ಟದ್ದಲ್ಲ (ಕಲಬೆರಕೆ ಮತ್ತು ನಕಲಿ) ಎಂದು ತಿಳಿದು ಬಂದಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 274 (ಔಷಧಗಳ ಕಲಬೆರಕೆ), 275 (ಕಲಬೆರಕೆ ಔಷಧಗಳ ಮಾರಾಟ), 276 (ವಿಭಿನ್ನ ಔಷಧ ಅಥವಾ ವೈದ್ಯಕೀಯ ತಯಾರಿಕೆಯಾಗಿ ಔಷಧ ಮಾರಾಟ) ಹಾಗೂ ಸೆಕ್ಷನ್ 17 (ತಪ್ಪಾಗಿ ಬ್ರಾಂಡ್ ಮಾಡಿದ ಔಷಧಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ, ಈ ಪ್ರಕರಣ 1940 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಉಲ್ಲಂಘನೆಗೆ ಸಹ ಸಂಬಂಧಿಸಿದೆ.
ಇದನ್ನೂ ಓದಿ: ಭಾರತದ ಕೆಮ್ಮಿನ ಸಿರಪ್ ನಿಂದ 18 ಮಕ್ಕಳ ಸಾವು ಪ್ರಕರಣ.. ಕಂಪನಿ ವಿರುದ್ಧ ಕೇಂದ್ರ ಸರ್ಕಾರದಿಂದ ಕ್ರಮ
ಪ್ರಕರಣವೇನು?: ಭಾರತೀಯ ಸಂಸ್ಥೆ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದಕ್ಷಿಣ ಆಫ್ರಿಕಾದ ಗಾಂಬಿಯಾದಲ್ಲಿ ಮಕ್ಕಳು ಸಾವನ್ನಪ್ಪಿದ ಆರೋಪದ ಬಳಿಕ, ಉಜ್ಬೇಕಿಸ್ತಾನದಲ್ಲೂ ಇಂಥಹದ್ದೇ ಘಟನೆ ಬೆಳಕಿಗೆ ಬಂದಿತ್ತು. ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನದಲ್ಲಿ ಭಾರತೀಯ ಕಂಪನಿ ಮರಿಯನ್ ಬಯೋಟೆಕ್ ತಯಾರಿಸಿದ ಡಾಕ್ 1 ಮ್ಯಾಕ್ಸ್ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಅದರಲ್ಲಿ 18 ಮಕ್ಕಳು ಮೃತಪಟ್ಟಿದ್ದರು. ಮೃತ ಮಕ್ಕಳು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮೊದಲು ಈ ಔಷಧಿಯನ್ನು 2 ರಿಂದ 7 ದಿನಗಳವರೆಗೆ ದಿನಕ್ಕೆ 3 ರಿಂದ 4 ಬಾರಿ, 2.5- 5 ಎಂಎಲ್ ತೆಗೆದುಕೊಂಡಿದ್ದಾರೆ. ಈ ಸಿರಪ್ ತೆಗೆದುಕೊಂಡು ಬಳಿಕ ಮಕ್ಕಳಿಗೆ ಆರೋಗ್ಯ ಹದಗೆಟ್ಟು ಉಸಿರಾಟದ ತೊಂದರೆ ಅನುಭವಿಸಿ ಸಾವಿಗೀಡಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿತ್ತು. ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ಇದನ್ನೂ ಓದಿ: ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವು ಪ್ರಕರಣ: ಭಾರತದ ಕೆಮ್ಮಿನ ಸಿರಪ್ ಬಳಸದಂತೆ WHO ಸೂಚನೆ
ವಿಶ್ವ ಆರೋಗ್ಯ ಸಂಸ್ಥೆಯಿಂದ(HHO) ಎಚ್ಚರಿಕೆ: ಮರಿಯನ್ ಬಯೋಟೆಕ್ ತಯಾರಿಸಿರುವ ಎರಡು ಕೆಮ್ಮಿನ ಸಿರಪ್‌ಗಳನ್ನು ನೀಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ (ಡಬ್ಲ್ಯುಎಚ್‌ಒ) ಈ ಹಿಂದೆ ಸೂಚಿಸಿತ್ತು. ಇಲ್ಲಿಯವರೆಗೆ ಔಷಧೀಯ ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಈ ಸಂಸ್ಥೆಯು ಯಾವುದೇ ಖಾತ್ರಿಯನ್ನು ನೀಡಿಲ್ಲ. ಹಾಗಾಗಿ, ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ತೆಗೆದುಕೊಳ್ಳಬಾರದು ಎಂದು ಹೇಳಿತ್ತು.