ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಸಚಿವ ಸಂಪುಟಕ್ಕೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ಇಂದು ರಾಜೀನಾಮೆ ನೀಡಿದ್ದಾರೆ. ಇಬ್ಬರು ಸಚಿವರು ಹಗರಣ ಆರೋಪ ಪ್ರಕರಣಗಳಲ್ಲಿ ಜೈಲು ಸೇರಿದ್ದಾರೆ. ರಾಜೀನಾಮೆ ಅಂಗೀಕಾರವಾಗಿದೆ ಎಂದು ವರದಿಯಾಗಿದೆ.
ದೆಹಲಿ ಸರ್ಕಾರವು ಜಾರಿಗೆ ತರಲು ಹೊರಟಿದ್ದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾರನ್ನು ಮೂರು ದಿನಗಳ ಹಿಂದಷ್ಟೇ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಐದು ದಿನಗಳ ಕಾಲ ಕಸ್ಟಡಿಯಲ್ಲಿದ್ದಾರೆ. ಇಂದು ಅವರಿಗೆ ಮಧ್ಯಾಹ್ನ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಕಾನೂನು ಪರಿಹಾರಕ್ಕಾಗಿ ಹೈಕೋರ್ಟ್ಗೆ ಹೋಗುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ನರಸಿಂಹ ಅವರಿದ್ದ ದ್ವಿಸದಸ್ಯ ಪೀಠವು ಸಲಹೆ ನೀಡಿತ್ತು. ಇದರ ಬೆನ್ನಲ್ಲೇ ಸಿಸೋಡಿಯಾ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ, ಸಾಕ್ಷ್ಯಗಳ ನಾಶ ಮತ್ತು ವಿರೂಪಗೊಳಿಸಿದ ಆರೋಪಗಳು ಸಿಸೋಡಿಯಾ ಮೇಲಿವೆ. ದೆಹಲಿ ಸರ್ಕಾರದಲ್ಲಿ ಸಿಸೋಡಿಯಾ ಪ್ರಭಾವಿ ಸಚಿವರಾಗಿದ್ದರು. ಒಟ್ಟು 18 ಖಾತೆಗಳು ಇವರ ಬಳಿ ಇದ್ದವು. ಆಪ್ ಮತ್ತು ಸರ್ಕಾರದಲ್ಲಿ ವಿಚಾರದಲ್ಲಿ ಕೇಜ್ರಿವಾಲ್ ನಂತರದಲ್ಲಿ ಎರಡನೇ ಪ್ರಮುಖ ಎಂದೇ ಹೇಳಲಾಗುತ್ತದೆ.
9 ತಿಂಗಳಿಂದ ಸತ್ಯೇಂದ್ರಗೆ ಜೈಲು: ಮತ್ತೊಂದೆಡೆ, ಕಳೆದ ವರ್ಷದ ಮೇ 3ರಂದು ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೂಡ ಜೈಲು ಸೇರಿದ್ದಾರೆ. ಅಂದಿನಿಂದ ಇವರು ತಿಹಾರ್ ಜೈಲಿನಲ್ಲಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಬಳಸಲಾದ ನಾಲ್ಕು ಶೆಲ್ ಕಂಪನಿಗಳ ನಿಜವಾದ ನಿಯಂತ್ರಣವನ್ನು ಸತ್ಯೇಂದ್ರ ಜೈನ್ ಹೊಂದಿದ್ದಾರೆ. ಈ ಪ್ರಕರಣದಲ್ಲಿ ಸಹ ಆರೋಪಿಗಳಾದ ಅಂಕುಶ್ ಜೈನ್ ಮತ್ತು ವೈಭವ್ ಜೈನ್ ಕೇವಲ ನಾಮಕಾವಸ್ತೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು. ಕಳೆದ ಮಾರ್ಚ್ 31ರಂದು ಜೈನ್ ಒಡೆತನದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳಿಗೆ ಸೇರಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.
ಅಲ್ಲದೇ, ಜೂನ್ 6ರಂದು ಸತ್ಯೇಂದ್ರ ಜೈನ್ ಮತ್ತು ಅವರ ಪತ್ನಿ ಮತ್ತು ಸಹಚರರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ 2.85 ಕೋಟಿ ರೂ. ನಗದು ಮತ್ತು 1.80 ಕೆಜಿ ತೂಕದ 133 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಅಕ್ರಮವಾಗಿ ಕೃಷಿ ಭೂಮಿ ಖರೀದಿಸಿದ ಆರೋಪವೂ ಜೈನ್ ಮೇಲಿದೆ. ಈ ಬಗ್ಗೆಯೂ ಇನ್ನೂ ತನಿಖೆ ನಡೆಯುತ್ತಿದೆ. ಇದರ ನಡುವೆ ನವೆಂಬರ್ ತಿಂಗಳಲ್ಲಿ ಜೈಲಿನಲ್ಲೇ ಜೈನ್ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿ ಟೀಕೆಗೂ ಗುರಿಯಾಗಿತ್ತು.
ಬಿಜೆಪಿ ಪ್ರತಿಕ್ರಿಯೆ: ಇಬ್ಬರು ಸಚಿವರ ರಾಜೀನಾಮೆ ಬಗ್ಗೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಇದು ದೆಹಲಿಯ ಜನರ ಗೆಲುವು ಎಂದು ಹೇಳಿದ್ದಾರೆ. ಭ್ರಷ್ಟ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆಯೇ ಜೈಲಿನಿಂದ ಸರ್ಕಾರ ನಡೆಸುವ ಪಾಪವನ್ನು ನಿಲ್ಲಿಸಬೇಕಿತ್ತು. ಭ್ರಷ್ಟರನ್ನು ರಕ್ಷಿಸಲು ಕೇಜ್ರಿವಾಲ್ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭಾ ಸದಸ್ಯ ರವಿಶಂಕರ್ ಪ್ರಸಾದ್ ಸಹ ದೆಹಲಿ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇಬ್ಬರು ಸಚಿವರು ಕೂಡ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದಾಗಲೇ ರಾಜೀನಾಮೆ ಕೊಡಬೇಕಿತ್ತು. ಆದರೆ, ಆಮ್ ಆದ್ಮಿ ಪಕ್ಷದ ಸರ್ಕಾರವು 3ಸಿಗಳಲ್ಲಿ (Cut, Commission & Corruption) ತೊಡಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 'ಸಿಬಿಐ ಬಂಧನ ಪ್ರಶ್ನಿಸಿ ಹೈಕೋರ್ಟ್ಗೆ ಹೋಗಿ': ಡಿಸಿಎಂ ಸಿಸೋಡಿಯಾಗೆ ಸುಪ್ರೀಂ ಸೂಚನೆ