ತೇಜ್‌ಪುರ: ಮಣಿಪುರದಲ್ಲಿ ನಡೆಯತ್ತಿರುವ ಜನಾಂಗೀಯ ಸಂಘರ್ಷಕ್ಕೆ ಬ್ರೇಕ್ ಇಲ್ಲವಾಗಿದೆ. ಹಿಂಸಾತ್ಮಕ ಕೃತ್ಯಗಳು ದಿನವೂ ವರದಿಯಾಗುತ್ತಿವೆ. ಈ ಮಧ್ಯೆ ಹಿಂಸಾಚಾರದಲ್ಲಿ ಸಾವಿಗೀಡಾದ 35 ಮೃತದೇಹಗಳನ್ನು ಚುರಾದಂದ್ಪುರ ಜಿಲ್ಲೆಯಲ್ಲಿ ಇಂದು ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ನಡೆಸಲಾಗುತ್ತಿದೆ.
ಇಲ್ಲಿನ ಚುರಾಚಂದ್‌ಪುರದ ತುಬುಂಗ್ (ಲಮ್ಕಾ) ಮೈದಾನದಲ್ಲಿ ಸಾಮೂಹಿಕ ಅಂತ್ಯಕ್ರಿಯೆಗೆ ಸಮುದಾಯದ ಮುಖಂಡರು ಸಜ್ಜಾಗಿದ್ದಾರೆ. ಇದಕ್ಕಾಗಿ ಗಲಭೆಪ್ರೇರಿತ ರಾಜ್ಯದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾಮೂಹಿಕ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಘರ್ಷಣೆಗಳು ನಡೆಯುತ್ತಿದ್ದು, ಈಗಲೂ ರಾಜ್ಯದ ವಿವಿಧೆಡೆ ಹಿಂಸಾತ್ಮಕ ಚಟುವಟಿಕೆಗಳು ಇನ್ನೂ ಮುಂದುವರಿದಿವೆ. ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವಿನ ಸಂಘರ್ಷ ವಾಸ್ತವವಾಗಿ ರಾಜ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಈವರೆಗೂ ಹಿಂಸಾಚಾರದಲ್ಲಿ 160 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಹಿಂಸಾಚಾರದಲ್ಲಿ ಸಾವನ್ನಪ್ಪಿದ ಕುಕಿಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲು ಅದರ ಸಂಘಟನೆಗಳು ನಿರ್ಧರಿಸಿವೆ. ಆಗಸ್ಟ್ 2 ರಂದು (ಬುಧವಾರ) ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿತ್ತು. ಅದರಂತೆ ಗುರುವಾರವಾದ ಇಂದು ಚುರಾಚಂದ್‌ಪುರದ ತುಬುಂಗ್ (ಲಮ್ಕಾ) ಮೈದಾನದಲ್ಲಿ ಅಂತಿಮ ವಿಧಿವಿಧಾನಕ್ಕೆ ಮುಂದಾಗಲಾಗಿದೆ.
ಬಿಗಿ ಬಂದೋಬಸ್ತ್: ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸುವ ಸಾಧ್ಯತೆಯಿದೆ. ಈ ವೇಳೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕೊನೆಯ ಯಾತ್ರೆ ಕಾರ್ಯಕ್ರಮಕ್ಕಾಗಿ ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಕುಕಿ ಬಂಡಾಯ ಗುಂಪುಗಳು ಮತ್ತು ಕುಕಿ ಸಮುದಾಯ ಸಾವನ್ನಪ್ಪಿದವರಿಗಾಗಿ ಅಂತಿಮ ನಮನ ಸಲ್ಲಿಸಿದರು.
ರಾಜಧಾನಿ ಇಂಫಾಲ್‌ನಲ್ಲಿರುವ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಜವಾಹರಲಾಲ್ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಶವಾಗಾರ ತಂಡವನ್ನು ಚುರಾಚಂದ್‌ಪುರಕ್ಕೆ ಕಳುಹಿಸಿಕೊಡಲು ಕುಕಿ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಚುರಾಚಂದ್ಪುರದಲ್ಲಿ ಕುಕಿ ಸಂಘಟನೆ ಹಮ್ಮಿಕೊಂಡಿರುವ ಕಾರ್ಯಕ್ರಮದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸುಪ್ರೀಂಕೋರ್ಟ್ ಅಸಮಾಧಾನ: ಮಣಿಪುರದಲ್ಲಿ ತೀವ್ರಗೊಂಡ ಹಿಂಸಾಚಾರದ ಬಗ್ಗೆ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮೇ ತಿಂಗಳಲ್ಲಿ ಶುರುವಾದ ಹಿಂಸಾಚಾರ ಈವರೆಗೂ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದಾದರೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ಯಂತ್ರಗಳು ಅಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದರ್ಥ ಎಂದು ಕಟುವಾಗಿ ಟೀಕಿಸಿದೆ.
ಇದನ್ನೂ ಓದಿ: ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಿ: ರಾಷ್ಟ್ರಪತಿ ಭೇಟಿಯಾದ ಖರ್ಗೆ ನಿಯೋಗದ ಒತ್ತಾಯ