ಇಂಫಾಲ, ಮಣಿಪುರ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಶಸ್ತ್ರಸಜ್ಜಿತ ಗುಂಪೊಂದು ಗ್ರಾಮದ ಮೇಲೆ ದಾಳಿ ಮಾಡಿ, ಮನೆಗಳಿಗೆ ಬೆಂಕಿ ಹಚ್ಚಿ, ಅತ್ಯಾಚಾರ ನಡೆಸಿ ಕೊಂದ ಘಟನೆಯಲ್ಲಿ ಪ್ರಮುಖ ಅಂಶವಾಗಿದೆ. ದೇಶವೇ ತಲೆತಗ್ಗಿಸುವಂತೆ ಮಾಡಿದ ಈ ಘಟನೆಯಲ್ಲಿ ಬಲಿಯಾದವರು ಮಾಜಿ ಸೈನಿಕನ (ಭಾರತೀಯ ಸೇನೆ) ಪತ್ನಿ ಎಂಬುದು ಗೊತ್ತೇ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತೆಯ ಪತಿ ಮಾಜಿ ಸೈನಿಕ, ಕಾರ್ಗಿಲ್ ಯುದ್ಧದ ವೇಳೆ ದೇಶವನ್ನು ರಕ್ಷಿಸಿದ್ದರೂ ಈ ಅಮಾನವೀಯ ಘಟನೆಯಿಂದ ಪತ್ನಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ನಾನು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದೆ. ನಾನು ಭಾರತೀಯ ಶಾಂತಿ ಪಾಲನಾ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿಯೂ ಕೆಲಸ ಮಾಡಿದ್ದೇನೆ. ಈ ರೀತಿ ದೇಶಕ್ಕಾಗಿ ಹೋರಾಡಿದ ನನಗೆ ನನ್ನ ಮನೆ, ಹೆಂಡತಿ ಮತ್ತು ಗ್ರಾಮಸ್ಥರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಷಯ ನನ್ನನ್ನು ಕಾಡುತ್ತಿದೆ ಎಂದು ಹೇಳಿದರು.
ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುವಾಗ ಮಾಜಿ ಸೈನಿಕರೊಬ್ಬರು ಅಳಲು ತೋಡಿಕೊಂಡರು. ಮೇ 4 ರಂದು ಗುಂಪೊಂದು ಅವರ ಹಳ್ಳಿಯ ಮೇಲೆ ದಾಳಿ ಮಾಡಿತ್ತು ಮತ್ತು ಅನೇಕ ಮನೆಗಳಿಗೆ ಬೆಂಕಿ ಹಚ್ಚಿತು. ಬಳಿಕ ಇಬ್ಬರು ಮಹಿಳೆಯರನ್ನು ಬಟ್ಟೆ ಬಿಚ್ಚಿಸಿ ಜನರ ಮುಂದೆ ಮೆರವಣಿಗೆ ಮಾಡಲಾಯಿತು. ಪೊಲೀಸರು ಅಲ್ಲಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ದುಷ್ಕೃತ್ಯ ಎಸಗಿದ ಪುಂಡರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಾರ್ಗಿಲ್ ವೀರ ಆಗ್ರಹಿಸಿದ್ದಾರೆ. ಆ ಮಾಜಿ ಸೈನಿಕ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಅಸ್ಸೋಂ ರೆಜಿಮೆಂಟ್ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದರು ಎಂದು ವರದಿಯಾಗಿದೆ.
ಬೆತ್ತಲೆ ಮೆರವಣಿಗೆ, ಅತ್ಯಾಚಾರ: ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿರುವ ವಿವರಗಳ ಪ್ರಕಾರ.. 'ಸುಮಾರು 900-1000 ಜನರು ಎಕೆ ರೈಫಲ್‌ಗಳು, ಎಸ್‌ಎಲ್‌ಆರ್, ಐಎನ್‌ಎಸ್‌ಎ ಮತ್ತು ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಗ್ರಾಮಕ್ಕೆ ಪ್ರವೇಶಿಸಿದ್ದಾರೆ. ಗ್ರಾಮದ ಎಲ್ಲ ಮನೆಗಳನ್ನು ಲೂಟಿ ಮಾಡಿ ನಾಶಪಡಿಸಲಾಗಿದೆ. ನಗದು ಕಳ್ಳತನದ ಜತೆಗೆ ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಪದಾರ್ಥಗಳನ್ನು ದೋಚಿದ್ದಾರೆ. ಬಳಿಕ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದಾಗ ಆಕೆಯ ಸಹೋದರ ಆಕೆಯನ್ನು ರಕ್ಷಿಸಲು ಯತ್ನಿಸಿದ್ದಾನೆ. ಹೀಗಾಗಿ ಅವರನ್ನು ಆ ದುಷ್ಕರ್ಮಿಗಳು ಸ್ಥಳದಲ್ಲೇ ಕೊಂದು ಹಾಕಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ನಾಲ್ವರ ಬಂಧನ: ಹತ್ತಿರದ ಅರಣ್ಯದಿಂದ ಪೊಲೀಸ್ ಸಿಬ್ಬಂದಿ ರಕ್ಷಿಸಿದ ಐದು ಜನರನ್ನು ಜನಸಮೂಹ ವಶಕ್ಕೆ ಪಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಮತ್ತು ಕಿರುಕುಳ ನೀಡಿದ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಸಂಬಂಧ ನಾಲ್ವರನ್ನು ಶೈಖುಲ್ ಪೊಲೀಸರು ಬಂಧಿಸಿದ್ದಾರೆ. ಜು.19 ರಂದು ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಕಾಂಗ್‌ಪೊಕ್ಪಿ ಜಿಲ್ಲೆಯ ಶೈಖುಲ್ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ(ಜೂನ್ 21) ದೂರು ದಾಖಲಿಸಲಾಗಿತ್ತು.
ಓದಿ: ಬುಡಕಟ್ಟು ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣ: ನಾಲ್ವರ ಬಂಧನ, ಅಪರಾಧಿಗಳಿಗೆ ಮರಣದಂಡನೆಯೇ ಸೂಕ್ತ ಎಂದ ಮಣಿಪುರ ಸಿಎಂ