ವಿಶಾಖಪಟ್ಟಣಂ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತನ್ನ ತಂದೆಗಾಗಿ ಯುವಕನೊಬ್ಬ ಅದೇ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸಕ್ಕೆ ಸೇರಿಕೊಂಡ್ರೂ ಪ್ರಯೋಜನವಾಗಲಿಲ್ಲ. ಕೆಲಸಕ್ಕೆ ಹಾಜರಾಗಿ ಕೆಲವೇ ಗಂಟೆಯಲ್ಲಿ ಆ ಯುವಕ ತನ್ನ ತಂದೆಯನ್ನೇ ಕಳೆದುಕೊಂಡಿದ್ದಾನೆ.
ಅಕ್ಕಯ್ಯಪಾಲೇ ಗ್ರಾಮದ ನಿವಾಸಿ ಮಧುಕಿಶನ್ ಎಂಬಿಎ ಪದವಿ ಪಡೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ಸೇರಿದ 1902 ಸ್ಪಂದನಾ ಕಾಲ್ ಸೆಂಟರ್ನಲ್ಲಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ಮಧುಕಿಶನ್ ತಂದೆ ಸುದರ್ಶನ್ ರಾವ್ (67) ವಿಶ್ರಾಂತ್ ಶಿಪ್ ಯಾರ್ಡ್ ಉದ್ಯೋಗಿ. ಸುದರ್ಶನ್ಗೆ ಕೊರೊನಾ ಸೋಂಕು ತಗುಲಿದ್ದು, ಮೇ 2ರಂದು ಇಲ್ಲಿನ ಕೆಜಿಎಚ್ ಆಸ್ಪತ್ರೆಗೆ ದಾಖಲಿಸಿದ್ದರು. ಸುದರ್ಶನ್ಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಎರಡು ದಿನಗಳ ಬಳಿಕ ಸ್ನಾನದ ಗೃಹದಲ್ಲಿ ಸುದರ್ಶನ್ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಅವರಿಗೆ ಪೆಟ್ಟಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ರೂ ಸಹ ಪ್ರಯೋಜನವಾಗಿಲ್ಲ. ಬಳಿಕ ಸುದರ್ಶನ್ ತನ್ನ ಮಗನಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮಧುಕಿಶನ್ ಆಸ್ಪತ್ರೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಸುದರ್ಶನ್ರಿಗೆ ಚಿಕಿತ್ಸೆ ಸಿಕ್ಕಿದೆ.
ಆಸ್ಪತ್ರೆಯವರ ನಿರ್ಲಕ್ಷ್ಯದಿಂದಾಗಿ ಮಧುಕಿಶನ್ ತನ್ನ ತಂದೆಯ ಜೊತೆ ಇರಲು ಇಚ್ಛಿಸಿದ್ದರು. ಆದ್ರೆ ಕೋವಿಡ್ ಆಸ್ಪತ್ರೆಯಾಗಿದ್ದರಿಂದ ಮುಧುಕಿಶನ್ಗೆ ಒಳಗಡೆ ಹೋಗಲು ಅನುಮತಿ ಇರಲಿಲ್ಲ. ತನ್ನ ತಂದೆಯ ಆರೋಗ್ಯಕ್ಕಾಗಿ ಸರ್ಕಾರಿ ಸ್ವಾಮ್ಯತ್ವದ ಕೆಲಸ ಬಿಟ್ಟು ಅದೇ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ಸ್ವೀಪರ್ ಕೆಲಸಕ್ಕೆ ಸೇರಿಕೊಂಡರು.
ಸೋಮವಾರ ರಾತ್ರಿ 9.30ಕ್ಕೆ ಮಧುಕಿಶನ್ ಕಾರ್ಯ ನಿಮಿತ್ತ ಹೊರಗಡೆ ತೆರಳಿ ಆಸ್ಪತ್ರೆಗೆ ವಾಪಸಾಗಿದ್ದಾರೆ. ತನ್ನ ತಂದೆ ಇರುವ ರೂಂಗೆ ತೆರಳಿದ್ದಾರೆ. ಅಲ್ಲಿ ಅವರ ತಂದೆ ಕಾಣಲಿಲ್ಲ. ಶೌಚಾಲಯದ ಆವರಣದಲ್ಲಿ ಅವರ ತಂದೆ ಬಿದ್ದಿದ್ದರು. ಆ ಸ್ಥಿತಿಯಲ್ಲಿ ತನ್ನ ತಂದೆಯನ್ನು ನೋಡಿದ ಮಧುಕಿಶನ್ ದಿಗ್ಭ್ರಮೆಗೊಂಡರು. ಅದೇ ವಾರ್ಡ್ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಬಂದು ನಿಮ್ಮ ತಂದೆ ಸಾವನ್ನಪ್ಪಿ ಬಹಳ ಗಂಟೆಗಳೇ ಕಳೆದಿವೆ ಎಂದಿದ್ದಾರೆ. ಈ ವಿಷಯ ಕೇಳಿದ ಮಧುಕಿಶನ್ಗೆ ಹೃದಯ ಒಡೆದಂತಾಗಿದೆ.
ಆಸ್ಪತ್ರೆ ಸಿಬ್ಬಂದಿಯರ ನಿರ್ಲಕ್ಷ್ಯದಿಂದಾಗಿ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಮಧುಕಿಶನ್, ಆಸ್ಪತ್ರೆಯ ಸೂಪರಿಂಟೆಂಡೆಂಟ್, ಸಿಎಸ್ಆರ್ ಬ್ಲಾಕ್ ಇನ್ಚಾರ್ಜ್, ಪೊಲೀಸ್ ಕಮಿಷನರ್ಗೆ ದೂರು ಸಲ್ಲಿಸಿದ್ದಾರೆ. ಸೋಮವಾರ ರಾತ್ರಿ 8.30ಕ್ಕೆ ನನ್ನ ತಂದೆ ಶೌಚಾಲಯದಲ್ಲಿ ಕುಸಿದು ಬಿದ್ರೂ ಸಹ ಯಾರು ಸಹಕರಿಸಿಲ್ಲ ಎಂದು ಮಧುಕಿಶನ್ ದೂರಿದ್ದಾರೆ.