ಜ್ವರ, ಆಯಾಸ ಹಾಗು ಗಂಟಲು ನೋವೂ ಸೇರಿದಂತೆ ವಿವಿಧ ರೋಗಲಕ್ಷಣಗಳನ್ನು ಹೊಂದಿದ್ದ ಇಟಾಲಿ ದೇಶದ ವ್ಯಕ್ತಿಯೋರ್ವನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಆತನಲ್ಲಿ ಮಂಕಿಪಾಕ್ಸ್, ಕೋವಿಡ್ ಹಾಗೂ ಏಡ್ಸ್ (HIV) ಒಟ್ಟಿಗೆ ದೃಢಪಟ್ಟಿದೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ವರದಿ ಮಾಡಿದೆ. ವ್ಯಕ್ತಿಯೊಬ್ಬ ಮೂರೂ ಸೋಂಕುಗಳು ಒಟ್ಟಿಗೆ ಹೊಂದಿರುವ ವಿಶ್ವದ ಮೊದಲ ಮತ್ತು ಅಪರೂಪದ ಪ್ರಕರಣ ಇದಾಗಿದೆ.
ಸ್ಪೇನ್ ಪ್ರವಾಸದಲ್ಲಿದ್ದ ವ್ಯಕ್ತಿ ಕಳೆದ ಕೆಲ ದಿನಗಳ ಹಿಂದೆ ಇಟಲಿಗೆ ವಾಪಸ್ ಆಗಿದ್ದ. ಆತನಲ್ಲಿ ಕೋವಿಡ್ನ ಕೆಲವು ಸೋಂಕು ಲಕ್ಷಣ ಕಾಣಿಸಿಕೊಂಡಿದ್ದು ತಪಾಸಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮೇಲ್ಕಂಡ ಎಲ್ಲ ರೋಗಗಳು ಆತನನ್ನು ಅಂಟಿಕೊಂಡಿರುವುದು ಗೊತ್ತಾಗಿದೆ.
36 ವರ್ಷದ ಈತ ಜೂನ್ 16 ರಿಂದ 20 ರವರೆಗೆ ಐದು ದಿನ ಸ್ಪೇನ್ನಲ್ಲಿ ಉಳಿದುಕೊಂಡಿದ್ದ. ಈ ವೇಳೆ ಅಲ್ಲಿ ಅನೇಕ ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ವೈದ್ಯರಲ್ಲಿ ಆತನೇ ಹೇಳಿದ್ದಾನೆ. ಮನೆಗೆ ಹಿಂತಿರುಗಿರುವ ವ್ಯಕ್ತಿಯಲ್ಲಿ ಕೋವಿಡ್ ಇರುವುದು ದೃಢಗೊಂಡಿದ್ದು, ಮಂಕಿಪಾಕ್ಸ್ನ ಗುಣಲಕ್ಷಣಗಳೂ ಕಾಣಿಸಿಕೊಂಡಿವೆ. ಕೈಕಾಲು, ಮುಖ ಹಾಗೂ ದೇಹದ ಇತರೆ ಭಾಗಗಳಲ್ಲಿ ಗುಳ್ಳೆಗಳೆದ್ದಿವೆ. ಹೀಗಾಗಿ, ಇಟಲಿಯ ಕ್ಯಾಟಾನಿಯಾದ ಸ್ಯಾನ್ ಮಾರ್ಕೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಸಾಂಕ್ರಾಮಿಕ ರೋಗಗಳ ಘಟಕಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಬಾಯ್ಫ್ರೆಂಡ್ಗೆ ಏಡ್ಸ್ ಇದೆ ಎಂದು ತನ್ನ ದೇಹದೊಳಗೂ HIV ಸೇರಿಸಿಕೊಂಡ ಗೆಳತಿ!
2021ರ ಸೆಪ್ಟೆಂಬರ್ ತಿಂಗಳಲ್ಲಿ ಈ ವ್ಯಕ್ತಿಗೆ ಕೊನೆಯದಾಗಿ ಎಚ್ಐವಿ ಸೋಂಕಿನ ಪರೀಕ್ಷೆ ನಡೆಸಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ಆದರೆ, ಸ್ಪೇನ್ನಲ್ಲಿ ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರಿಂದ ಮತ್ತೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಮಹಾಮಾರಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆಂದು ಎಂಬ ಮಾಹಿತಿ ದೊರೆತಿದೆ.