ಖಾರ್ಗೋನ್(ಮಧ್ಯಪ್ರದೇಶ): ಇತ್ತೀಚಿನ ವರ್ಷಗಳಲ್ಲಿ ಯುವಕರು ಹೃದಯಾಘಾತಕ್ಕೆ ತುತ್ತಾಗುತ್ತಿರುವ ಬೆಳವಣಿಗೆಗಳು ಆಗಾಗ್ಗೆ ವರದಿಯಾಗುತ್ತಿವೆ. ಜಿಮ್, ಆಟೋಟ ಮತ್ತು ಮತ್ತಿತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಗ ಹಠಾತ್ ಹೃದಯಸ್ತಂಭನ ಉಂಟಾಗುತ್ತಿರುವ ಘಟನೆಗಳು ಆತಂಕಕ್ಕೂ ಕಾರಣವಾಗುತ್ತಿವೆ. ಇಂಥದ್ದೇ ಒಂದು ಘಟನೆ ಶನಿವಾರ ಮಧ್ಯಪ್ರದೇಶದಲ್ಲಿ ಸಂಭವಿಸಿತು. ಕ್ರಿಕೆಟ್ ಆಡುತ್ತಿದ್ದಾಗ 22 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಖಾರ್ಗೋನ್ ಜಿಲ್ಲೆಯ ಬಲ್ವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಕೂಟ್ ಗ್ರಾಮದಲ್ಲಿ ಸಂಜೆಯ ವೇಳೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಇಂದಲ್ ಸಿಂಗ್ ಜಾಧವ್ ಬಂಜಾರಾ ಎಂಬ ಯುವಕ ಬೌಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಅಸ್ವಸ್ಥರಾಗಿದ್ದಾರೆ. ಮೈದಾನದಲ್ಲೇ ಕೆಲ ಹೊತ್ತು ವಿಶ್ರಾಂತಿ ಪಡೆದರು. ನಂತರ ಸಹಆಟಗಾರರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಜಾಧವ್ ಕೊನೆಯುಸಿರೆಳೆದರು.
"ಬಂಜಾರಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಮುನ್ನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ" ಎಂದು ಬದ್ವಾಹ್ ಆಸ್ಪತ್ರೆಯ ಡಾ.ವಿಕಾಸ್ ತಲ್ವೇರ್ ಹೇಳಿದರು.
"ಯುವಕ ಬರ್ಖಾಡ್ ತಾಂಡಾ ಗ್ರಾಮದ ತಂಡಕ್ಕಾಗಿ ಆಡುತ್ತಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಈ ತಂಡವು 70 ರನ್ ಕಲೆಹಾಕಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವಾಗ ಬಂಜಾರಾ ಅಸ್ವಸ್ಥರಾದರು. ಎದೆನೋವು ಎಂದು ಹೇಳಿ ಕೆಲಕಾಲ ಕುಳಿತುಕೊಂಡರು. ಬಳಿಕ ತಂಡದ ಆಟಗಾರರು ಹತ್ತಿರದ ಬದ್ವಾಹ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಶಾಲಿಗ್ರಾಮ್ ಗುರ್ಜರ್ ಎಂಬವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತಂದೆ, ಇಬ್ಬರು ಪುತ್ರಿಯರು, ಓರ್ವ ಮಗ ಆತ್ಮಹತ್ಯೆ
ಇತ್ತೀಚಿನ ಪ್ರಕರಣ- ಹೃದಯಾಘಾತದಿಂದ ಮುಖ್ಯ ಶಿಕ್ಷಕ ನಿಧನ: ರಾಯಚೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಡಿಸೆಂಬರ್ 26ರಂದು ನಡೆದಿದೆ. ಸಿಂಧನೂರು ತಾಲೂಕಿನ ಗದ್ರಟಗಿ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕ ಸುರೇಶ ಜಾಡರ್ (57) ಮೃತರು.
ಶಾಲೆಯಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಕಚೇರಿ ಕುರ್ಚಿಯ ಮೇಲೆ ಜಾಡರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಸಹಶಿಕ್ಷಕರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅಷ್ಟರಲ್ಲಿಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
ಇದನ್ನೂ ಓದಿ: ರಾಯಚೂರು: ಹೃದಯಾಘಾತದಿಂದ ಕುಸಿದು ಬಿದ್ದು ಮುಖ್ಯ ಶಿಕ್ಷಕ ನಿಧನ