ಬುಲಂದ್‌ಶಹರ್ (ಉತ್ತರ ಪ್ರದೇಶ): ಕೂದಲು ಕತ್ತರಿಸಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಕ್ಷೌರಿಕನ ಮೇಲೆ ಗುಂಡು ಹಾರಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಕ್ಷೌರಿಕನನ್ನು ಅಗೌತಾ ಪಟ್ಟಣದ ಭೈನಸ್ರೋಳಿ ಗ್ರಾಮದ ಇರ್ಫಾನ್ ಎಂದು ಗುರುತಿಸಲಾಗಿದೆ. ಸಮೀರ್ ಎಂಬಾತ ಹಾಗೂ ಆತನ ಮೂವರು ಸ್ನೇಹಿತರು ಯಾವಾಗಲು ಇರ್ಫಾನ್ ಅಂಗಡಿಯಲ್ಲಿಯೇ ಕ್ಷೌರ ಮಾಡಿಸಿಕೊಳ್ಳಲು ಬರುತ್ತಿದ್ದರು ಹಾಗೂ ಬಾಕಿ ಹಣವನ್ನು ಉಳಿಸಿಕೊಂಡಿದ್ದರು. ನಿನ್ನೆ ಕೂಡ ಹೇರ್ಕಟ್ ಮಾಡಿಸಿಕೊಳ್ಳಲು ಈ ನಾಲ್ವರು ಬಂದಿದ್ದಾರೆ. ಆದರೆ ಇರ್ಫಾನ್, ಮೊದಲು ಬಾಕಿ ಹಣ ಪಾವತಿಸಿ, ಆಮೇಲೆ ಕ್ಷೌರ ಮಾಡುವೆ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಸಮೀರ್ ತನ್ನ ಪರವಾನಗಿ ಪಡೆದ ಪಿಸ್ತೂಲಿನಿಂದ ಇರ್ಫಾನ್ ಮೇಲೆ ಹಾಗೂ ಆತನ ಸಹೋದರ ಇಮ್ರಾನ್ ಕಾಲಿಗೆ ಗುಂಡು ಹಾರಿಸಿದ್ದಾನೆ.
ಇದನ್ನೂ ಓದಿ: Drug war: ಮೂವರನ್ನು ಕೊಂದು, ಹೆಣಗಳನ್ನು ನೇತುಹಾಕಿದ್ದು ಯಾಕೆ ಗೊತ್ತಾ?
ಇರ್ಫಾನ್ ಸ್ಥಳದಲ್ಲೇ ಮೃತಪಟ್ಟಿದ್ದು, ಇಮ್ರಾನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.