ನವದೆಹಲಿ: ದೆಹಲಿಯಲ್ಲಿ ರಿಂಕು ಶರ್ಮಾ ಹತ್ಯೆ ಪ್ರಕರಣ ಮಾದ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಇದೀಗ ಬೇಗಂಪುರ್ ಪ್ರದೇಶದಲ್ಲಿ ಅಪ್ರಾಪ್ತೆಯೊಬ್ಬಳ ಹತ್ಯೆ ರಾಷ್ಟ್ರ ರಾಜಧಾನಿಯನ್ನು ನಡುಗಿಸಿದೆ.
ಬೇಗಂಪುರ್ನಲ್ಲಿರುವ ತನ್ನ ಮನೆಯಲ್ಲಿ ಶುಕ್ರವಾರ ಸಂಜೆ 17 ವರ್ಷದ ಅಪ್ರಾಪ್ತೆಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿ ಲಾಯ್ಕ್ ಎಂಬಾತನನ್ನು ಬಂಧಿಸಲು ದೆಹಲಿ ಪೊಲೀಸರು ಬಲೆ ಬೀಸಿದ್ದಾರೆ. ಇದರ ನಡುವೆ ಪೊಲೀಸರು ಸಂತ್ರಸ್ತೆಯ ನಿವಾಸದ ಬಳಿ ಭದ್ರತೆ ಹೆಚ್ಚಿಸಿದ್ದಾರೆ.
ಪೊಲೀಸರ ಪ್ರಕಾರ, ಅಪ್ರಾಪ್ತೆ ಈ ಹಿಂದೆ ತನ್ನ ಕುಟುಂಬಸ್ಥರೊಂದಿಗೆ ಬವಾನಾ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಒಂದು ವರ್ಷದ ಹಿಂದೆ ಬೇಗಂಪುರ್ ಪ್ರದೇಶಕ್ಕೆ ಈ ಕುಟುಂಬ ಸ್ಥಳಾಂತರಗೊಂಡಿತ್ತು. ಈ ಹಿಂದೆ ಅವರ ನೆರೆಯವನಾಗಿದ್ದ (ಬವಾನಾ ಪ್ರದೇಶದಲ್ಲಿ ) 25 ವರ್ಷದ ಲಾಯ್ಕ್ ಬೇಗಂಪುರ್ ಪ್ರದೇಶದ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದನಂತೆ. ಜೊತೆಗೆ ಹುಡುಗಿಯ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇತ್ತೀಚೆಗೆ ಮದುವೆಯಾಗುವಂತೆ ಆಕೆಯಲ್ಲಿ ಕೇಳಿಕೊಂಡಿದ್ದು, ಆಕೆ ನಿರಾಕರಿಸಿದ್ದಾಳೆ ಎಂಬ ಮಾಹಿತಿಯನ್ನು ಡಿಸಿಪಿ ಪ್ರಮೋದ್ ಕುಮಾರ್ ಮಿಶ್ರಾ ನೀಡಿದ್ದಾರೆ.
ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಕೊಲೆ ಶಂಕೆ
ಈ ಕುರಿತು ದೂರು ದಾಖಲಾಗಿದೆ. ಮೃತಳ ಸಹೋದರ ತನ್ನ ದೂರಿನಲ್ಲಿ ಲಾಯ್ಕ್ ತಮ್ಮ ಮನೆಯನ್ನು ಲಾಕ್ ಮಾಡಿ ಹೊರಗೆ ಓಡುತ್ತಿರುವುದನ್ನು ನೋಡಿದೆ ಎಂದು ತಿಳಿಸಿದ್ದಾನೆ. ಬಳಿಕ ಆಕೆ ರಕ್ತಸಿಕ್ತವಾಗಿ ಬಿದ್ದಿರುವುದನ್ನು ಸಹೋದರ ನೋಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.