ಜೋಧ್‌ಪುರ (ರಾಜಸ್ಥಾನ): ಪಾಕಿಸ್ತಾನದ ಗೂಢಾಚಾರರಿಗೆ ಪ್ರಮುಖ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ರಾಜಸ್ಥಾನ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಗುಪ್ತಚರ ಸಂಸ್ಥೆಯ ಜೈಪುರ ಘಟಕ ಮಂಗಳವಾರ ಯುವಕನೋರ್ವನನ್ನು ವಶಕ್ಕೆ ಪಡೆದಿದೆ.
ಭಾರತೀಯ ಸೇನೆಯು ಸಾಮಾನ್ಯವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ರಾಜಸ್ಥಾನದ ಜೋಧಪುರದಲ್ಲಿ ಪರೀಕ್ಷೆ ಮಾಡುತ್ತದೆ. ಇದೇ ಸ್ಥಳದಿಂದ ಯುವಕನನ್ನು ಬಂಧಿಸಿದ್ದು, ಆರೋಪಿ ಭಾರತೀಯ ಸೇನೆಯ ವಿವರಗಳನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಬಲ ರಾಜಕೀಯ ಕುಟುಂಬದ ಯುವಕ
ಇದು ಹನಿಟ್ರ್ಯಾಪ್ ಪ್ರಕರಣ ಎಂದು ಪೊಲೀಸರ ಮೂಲಗಳು ತಿಳಿಸಿವೆ. ಈ ಹನಿಟ್ರ್ಯಾಪ್ ಪಾಕಿಸ್ತಾನದ ಐಎಸ್ಐ ಮಾಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಐಎಸ್ಐ ಏಜೆಂಟ್ ಆಗಿದ್ದ ಮಹಿಳೆ ಮೊದಲು ಫೇಸ್‌ಬುಕ್ ಮೂಲಕ ಯುವಕನ ಸ್ನೇಹ ಬೆಳೆಸಿ, ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸಪ್ನಲ್ಲಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಕ್ಲಬ್ಗಳಲ್ಲೂ ಮದ್ಯ ಪಾರ್ಸೆಲ್ಗೆ ಸರ್ಕಾರ ಅನುಮತಿ
ನಂತರ ಪ್ರೇಮಜಾಲಕ್ಕೆ ಬಿದ್ದ ಯುವಕನ ಆಕ್ಷೇಪಾರ್ಹ ಚಿತ್ರಗಳನ್ನು ಸಂಗ್ರಹಿಸಿದ ಐಎಸ್ಐ ಏಜೆಂಟ್ ವಿವಿಧ ಸರ್ಕಾರಿ ಸಂಸ್ಥೆಗಳ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಯುವಕ ಪ್ರಬಲ ರಾಜಕೀಯ ಕುಟುಂಬಕ್ಕೆ ಸೇರಿದವನು ಎನ್ನಲಾಗಿದೆ. ಕರೆ ದಾಖಲೆಗಳ ಆಧಾರದ ಮೇಲೆ ಯುವಕನನ್ನು ಬಂಧಿಸಲಾಗಿದ್ದು, ಆ ವ್ಯಕ್ತಿ ಯಾವ ಮಾಹಿತಿ ರವಾನಿಸಿದ್ದಾನೆ ಎಂಬುದನ್ನು ಕಂಡು ಹಿಡಿಯಲು ಭದ್ರತಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ.