ಬಗಾಹನ್ (ಬಿಹಾರ): ಕಳೆದ ಒಂದು ತಿಂಗಳಿನಿಂದ ಬಿಹಾರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆಯವರು ಕೊಂದು ಹಾಕಿದ್ದಾರೆ. ಕಬ್ಬಿನ ಗದ್ದೆಯಲ್ಲಿ ಅಡಗಿದ್ದ ಹುಲಿಗೆ ಅರಣ್ಯ ಸಿಬ್ಬಂದಿ 4 ಗುಂಡು ಹಾರಿಸಿದ್ದಾರೆ.
ಬಗಾಹನ್ ಪ್ರದೇಶದಲ್ಲಿ ಕಳೆದ ಒಂದು ತಿಂಗಳಲ್ಲೇ ಒಟ್ಟಾರೆ ಒಂಬತ್ತು ಜನರನ್ನು ಈ ನರಭಕ್ಷಕ ಹುಲಿ ಬಲಿ ಪಡೆದಿತ್ತು. ಅದರಲ್ಲೂ ಕಳೆದ ನಾಲ್ಕು ದಿನಗಳಲ್ಲೇ ನಾಲ್ಕು ಜನರನ್ನು ಹುಲಿ ಕೊಂದು ಹಾಕಿತ್ತು. ಇದರಿಂದ ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಗಿತ್ತು.
ನಿನ್ನೆಯಷ್ಟೇ ಹುಲಿ ಹತ್ಯೆಗೆ ಆದೇಶಿಸಲಾಗಿತ್ತು: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಕಳೆದ ಐದು ತಿಂಗಳಿಂದಲೂ ಈ ಹುಲಿಯ ಹಾವಳಿ ಹೆಚ್ಚಾಗಿತ್ತು. ಇದುವರೆಗೆ ವಿವಿಧ ಪ್ರದೇಶಗಳಲ್ಲಿ ಅನೇಕ ಜನರ ಮೇಲೆ ಹುಲಿ ದಾಳಿ ಮಾಡಿತ್ತು. ಅದರಲ್ಲೂ ಕಳೆದ ಒಂದು ತಿಂಗಳಿಂದ ಇದರ ಅಟ್ಟಹಾಸ ಅಧಿಕವಾಗಿತ್ತು. ಶುಕ್ರವಾರದವರೆಗೆ ಏಳು ಜನರನ್ನು ಕೊಂದು ಹಾಕಿತ್ತು. ಹೀಗಾಗಿಯೇ ಶುಕ್ರವಾರ ಬಿಹಾರ ಮುಖ್ಯ ವನ್ಯಜೀವಿ ಅಧಿಕಾರಿ ಪಿಕೆ ಗುಪ್ತಾ ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದರು.
ಬೆಳಗ್ಗೆ ತಾಯಿ ಮತ್ತು ಮಗನ ಕೊಂದ ಹುಲಿ: ಶುಕ್ರವಾರ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ ನಂತರವೂ ಹುಲಿ ತನ್ನ ಅಟ್ಟಹಾಸ ಮೆರೆದಿತ್ತು. ಗೋವರ್ಧನ ಪೊಲೀಸ್ ಠಾಣೆ ವ್ಯಾಪ್ತಿಯ ಬಲುವಾ ಗ್ರಾಮದಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಮಹಿಳೆ ಮತ್ತು ಆಕೆಯ ಮಗನನ್ನು ಹುಲಿ ಕೊಂದು ಹಾಕಿ ಅರಣ್ಯ ಅಧಿಕಾರಿಗಳಿಗೆ ಸವಾಲು ಹಾಕಿತ್ತು. ಆದರೆ, ಕೊನೆಗೆ ಇಂದು ಕಬ್ಬಿನ ಗದ್ದೆಯಲ್ಲಿ ಅಡಗಿದ್ದ ನರಭಕ್ಷಕ ಹುಲಿಗೆ ಅರಣ್ಯ ಸಿಬ್ಬಂದಿ ನಾಲ್ಕು ಗುಂಡು ಹಾರಿಸಿ, ಅದರ ಅಂತ್ಯವಾಡಿದ್ದಾರೆ.
30 ದಿನಗಳ ನಿರಂತರ ಸೆರೆ ಕಾರ್ಯ: ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಹುಲಿಯ ಸೆರೆಗೆ ಅರಣ್ಯ ಅಧಿಕಾರಿಗಳು ಕಳೆದ 30 ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಹೈಟೆಕ್ ಕಣ್ಗಾವಲು ವ್ಯವಸ್ಥೆ, ಆಧುನಿಕ ರೈಫಲ್‌ಗಳು, ಪರಿಣಿತ ಶೂಟರ್‌ಗಳೊಂದಿಗೆ ಸುಮಾರು 150 ಅನುಭವಿ ಫಾರೆಸ್ಟ್ ಗಾರ್ಡ್‌ಗಳು ಸೇರಿ 700 ಸಿಬ್ಬಂದಿಯ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಮನುಷ್ಯರ ರಕ್ತದ ರುಚಿ ನೋಡಿದ್ದ ಹುಲಿ: ಅಲ್ಲದೇ, ಕಾಡೆಮ್ಮೆ ಆಮಿಷವೊಡ್ಡಿ ಹುಲಿಯ ಸೆರೆ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪ್ರತಿ ಎರಡ್ಮೂರು ಗಂಟೆಗಳಿಗೆ ತನ್ನ ವಾಸ ಸ್ಥಳವನ್ನು ಬದಲಾಯಿಸುತ್ತಲೇ ಇರುತ್ತಿದ್ದ ಹುಲಿ ಅರಣ್ಯ ಅಧಿಕಾರಿಗಳಿಗೆ ಸಿಗುತ್ತಲೇ ಇರಲಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ಹುಲಿಯ ಚಲನವಲನದ ಸೆರೆಯಾದರೂ ಬಲೆಗೆ ಮಾತ್ರ ಬೀಳುತ್ತಿರಲಿಲ್ಲ. ಇದರ ನಡುವೆ ಮನುಷ್ಯರ ರಕ್ತದ ರುಚಿ ನೋಡಿದ್ದ ಹುಲಿಯು ಮೇಲಿಂದ ಮೇಲೆ ದಾಳಿ ಮಾಡಿ ಜನರನ್ನು ಕೊಂದು ಹಾಕುತ್ತಿತ್ತು.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನ: ಕಳೆದ ಒಂದು ತಿಂಗಳಿಂದ ಈ ನರಭಕ್ಷಕ ಹುಲಿ ಭೀತಿಯಲ್ಲೇ ಅನೇಕ ಗ್ರಾಮಸ್ಥರು ಜೀವನ ದೂಡುವಂತೆ ಆಗಿತ್ತು. ಅಲ್ಲದೇ, ಕೆಲ ದಿನಗಳಿಂದ ಹೊಲಗಳತ್ತ ಹೋಗುವುದನ್ನೂ ಗ್ರಾಮಸ್ಥರು ನಿಲ್ಲಿಸಿದ್ದರು. ಹುಲಿ ಮನೆಗಳತ್ತ ಬರದಂತೆ ಮನೆ ಮುಂದೆ ಬೆಂಕಿ ಹಚ್ಚಿ ರಾತ್ರಿ ಕಳೆಯುತ್ತಿದ್ದರು. ಆದ್ದರಿಂದ ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿತ್ತು. ಅಂತೆಯೇ ಇಂದು ಹುಲಿಯ ಅಂತ್ಯವಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.
ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿದ್ದ 40 ಹುಲಿಗಳು: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿರುವ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದ ಏಕೈಕ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ.17.4% (898.45 ಕಿಮೀ) ಪ್ರದೇಶವನ್ನು ಆವರಿಸಿದೆ. 2018ರ ಹುಲಿ ಗಣತಿಯ ಪ್ರಕಾರ ಈ ಮೀಸಲು ಪ್ರದೇಶದಲ್ಲಿ 40 ಹುಲಿಗಳಿದ್ದವು.
ಇದನ್ನೂ ಓದಿ: ಒಂದೇ ತಿಂಗಳಲ್ಲಿ 7 ಜನರ ಕೊಂದು ಹಾಕಿದ ನರಭಕ್ಷಕ ಹುಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ