ಇಂಫಾಲ: ಕೃಷಿ ಮಾಡದೆ ಪಾಳು ಬಿದ್ದಿದ್ದ 300 ಎಕರೆ ಭೂಮಿಯನ್ನು ವ್ಯಕ್ತಿಯೊಬ್ಬ ದಟ್ಟ ಅರಣ್ಯವಾಗಿ ಪರಿವರ್ತಿಸಿದ್ದು ಎಲ್ಲರ ಗಮನ ಸೆಳೆದಿದೆ. ಸತತ 20 ವರ್ಷಗಳ ಕಾಲ ಅವಿರತವಾಗಿ ಶ್ರಮಿಸಿದ ವ್ಯಕ್ತಿ ಅರಣ್ಯ ಬೆಳೆಸಿದ ಸಾಧಕನಾಗಿದ್ದಾನೆ. ಇದು ಮಣಿಪುರ ರಾಜ್ಯದ ಇಂಫಾಲ್ ಪಶ್ಚಿಮ ಜಿಲ್ಲೆಯ ಉರಿಪೋಕ್ ಖೈಡೆಮ್ ಲಿಕೈ ಪ್ರದೇಶದ 47 ವರ್ಷದ ಮೊಯಿರಾಂಗ್ಥೆಮ್ ಲೋಯಾ ಅವರ ಯಶಸ್ಸಿನ ಕಥೆ.
ತಾವು ಅರಣ್ಯ ಬೆಳೆಸಿದ ಯಶೋಗಾಥೆಯ ಬಗ್ಗೆ ಮಾತನಾಡಿದ ಲೋಯಾ, 2000 ನೇ ಇಸ್ವಿಯಲ್ಲಿ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ನಾನು ಕೌಬ್ರು ಪರ್ವತ ಪ್ರದೇಶಕ್ಕೆ ತೆರಳಿದೆ. ಹಿಂದೆ ಅನೇಕ ಮರಗಳಿಂದ ಆವೃತವಾಗಿ ಅರಣ್ಯವಾಗಿದ್ದ ಪ್ರದೇಶದಲ್ಲಿ ಮರಗಳನ್ನು ವಿವೇಚನೆಯಿಲ್ಲದೆ ಕಡಿಯುವುದನ್ನು ನೋಡಿದ್ದೆ. ಅಲ್ಲಿ ಹಸಿರಿನ ನಾಶವಾಗುವುದನ್ನು ನೋಡಿ ಆಘಾತವಾಯಿತು. ಹೀಗಾಗಿ ಪ್ರಕೃತಿ ಮಾತೆಗೆ ನನ್ನ ಕೈಲಾಗಿದ್ದನ್ನು ಮಾಡಲು ನಿರ್ಧರಿಸಿ, ಸೂಕ್ತ ಸ್ಥಳದ ಹುಡುಕಾಟ ಪ್ರಾರಂಭಿಸಿದೆ ಎಂದರು.
ನಾನು ಇಂಫಾಲದ ಹೊರವಲಯದಲ್ಲಿರುವ ಲಾಂಗೋಲ್ ಪರ್ವತ ಶ್ರೇಣಿಯನ್ನು ತಲುಪಿದಾಗ ನನ್ನ ಅನ್ವೇಷಣೆ ಕೊನೆಗೊಂಡಿತು. ಕಾಡು ಸುಟ್ಟು ಬಂಜರಾಗಿದ್ದ ಪ್ರದೇಶವನ್ನು ಮತ್ತೆ ಹಸಿರು ಕಾಡನ್ನಾಗಿ ಮಾಡಲು ನಿರ್ಧರಿಸಿದೆ. ನಂತರ ಪುಟ್ಟ ಗುಡಿಸಲು ನಿರ್ಮಿಸಿ ಇಲ್ಲೇ ಇರತೊಡಗಿದೆ. ನನ್ನ ಸ್ವಂತ ಹಣದಲ್ಲಿ ಬಿದಿರು, ಓಕ್, ತಾಳೆ, ತೇಗದಂತಹ ಗಿಡಗಳನ್ನು ಖರೀದಿಸಿ ಮಳೆಗಾಲಕ್ಕೂ ಮುನ್ನ ನೆಡಲು ಆರಂಭಿಸಿದೆ ಎಂದು ಲೋಯಾ ತಿಳಿಸಿದರು.
ನಂತರ ರಾಜ್ಯ ಅರಣ್ಯ ಅಧಿಕಾರಿಗಳು ಲೋಯಾ ಅವರ ಪ್ರಯತ್ನಕ್ಕೆ ಸಹಕಾರ ನೀಡಿದ್ದು, ಈಗ 300 ಎಕರೆ ಪ್ರದೇಶ ಮತ್ತೆ ಅರಣ್ಯವಾಗಿದೆ.
ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಕಂಡು ಕೇಳರಿಯದ ಭೀಕರ ಕಾಳ್ಗಿಚ್ಚು: ಎರಡೇ ದಿನದಲ್ಲಿ ಸರ್ವನಾಶ