ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿದ ಅಮಲಿನಲ್ಲಿ ಈ ವ್ಯಕ್ತಿಯು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪ್ರಧಾನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದಾರೆ.
ಈ ಕೊಲೆಯನ್ನು ಮಾಡಿಸಲು ಹಿಟ್‌ಮ್ಯಾನ್‌ಗೆ 30 ಕೋಟಿ ರೂ ಕೊಡುವುದಾಗಿಯೂ ಆತ ಫೋನ್ನಲ್ಲಿ ಹೇಳಿದ್ದ ಎನ್ನಲಾಗಿದೆ. ಇನ್ನು ಈತನ ಮನಸ್ಥಿತಿ ಸರಿಯಿಲ್ಲದ ಕಾರಣ ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
35 ವರ್ಷದ ಪಿಂಟು ಸಿಂಗ್ ಈ ಕೆಲಸ ಮಾಡಿದವ. ವೃತ್ತಿಯಲ್ಲಿ ಬಡಗಿ ಕೆಲಸ ಮಾಡುತ್ತಿರುವ ಈತ, ಸಾಗರಪುರ ಪ್ರದೇಶದ ಕೈಲಾಶ್ ಪುರಿಯಲ್ಲಿ ವಾಸಿಸುತ್ತಿದ್ದಾನೆ. ಕುಟುಂಬ ಸದಸ್ಯರ ಪ್ರಕಾರ, ಅವನು ಮಾದಕ ವ್ಯಸನಿಯಾಗಿದ್ದು ಈ ರೀತಿ ಮಾಡಿದ್ದಾನೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ ಎಂದು ಡಿಸಿಪಿ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಈ ಕುಡುಕನಿಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮನೋವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.