ಬಂಕುರಾ (ಪಶ್ಚಿಮ ಬಂಗಾಳ): ಚುನಾವಣೆಗಾಗಿ ಜನರಿಗೆ ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣ ಕಣ ರಂಗೇರುತ್ತಿದ್ದು, ನಿನ್ನೆ ಸಿಎಂ ಮಮತಾ ಬ್ಯಾನರ್ಜಿ ಬಂಕುರಾ ಜಿಲ್ಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ನಾವು ಅಧಿಕಾರಕ್ಕೆ ಬಂದರೆ ಕಪ್ಪುಹಣವನ್ನ ವಾಪಸ್ ತಂದು ದೇಶದಲ್ಲಿರುವ ಎಲ್ಲ ಜನರ ಖಾತೆಗೆ ತಲಾ 15 ಲಕ್ಷ ರೂ. ಹಾಕುತ್ತೇವೆಂದು ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಭರವಸೆ ನೀಡಿತ್ತು. ಈ ವಿಚಾರವನ್ನು ದೀದಿ ಮತ್ತೆ ಎತ್ತಿದರು.
"ಕಳೆದ ಬಾರಿ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣ ಜಮೆ ಆಗಿದ್ಯಾ? ಚುನಾವಣೆ ವೇಳೆ ಬಿಜೆಪಿಯವರು ಬಂದ್ರು, ಅಕ್ಕಿ-ಬೇಳೆ ಕೊಡ್ತೀವಿ ಅಂದ್ರು. ನಿಮ್ಮ ವೋಟ್ ಕಿತ್ತುಕೊಂಡು ಹೋದ್ರು ಅಷ್ಟೇ. ಸುಳ್ಳು ಭರವಸೆಗಳಿಗೆ ಬಲಿಯಾಗಬೇಡಿ" ಎಂದು ಹರಿಹಾಯ್ದರು.
ಇದನ್ನೂ ಓದಿ: ಬಂಗಾಳದ ಪಾಲಿಕೆಗಳಲ್ಲಿರುವ ರಾಜಕಾರಣಿಗಳ ಅಧಿಕಾರಕ್ಕೆ ಚುನಾವಣಾ ಆಯೋಗದ ನಿರ್ಬಂಧ
ಬಂಕುರಾ ಜಿಲ್ಲೆಯ ಮಹಿಳೆಯರಿಗೆ ಸರ್ಕಾರಿ ಕೆಲಸಗಳಿಗೆ ಮೀಸಲಾತಿ ಕೊಡಿಸುವ ಭರವಸೆ ನೀಡಿದ ಬಿಜೆಪಿಗೆ ತಿರುಗೇಟು ನೀಡಿದ ಮಮತಾ, ನಾವು ಈಗಾಗಲೇ ಪಂಚಾಯಿತಿ, ಪುರಸಭೆಗಳಲ್ಲಿ ಶೆ.50 ರಷ್ಟು ಮೀಸಲಾತಿ ನೀಡಿದ್ದೇವೆ. ನಮ್ಮ ತೃಣಮೂಲ ಕಾಂಗ್ರೆಸ್ದ್ (ಟಿಎಂಸಿ) ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಮಾರ್ಚ್ 27 ರಿಂದ ಏಪ್ರಿಲ್ 29ರ ವರೆಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.