ಋಷಿಕೇಶ್(ಉತ್ತರಾಖಂಡ್) : ಉತ್ತರಾಖಂಡ್ನ ಡೆಹ್ರಾಡೂನ್ ಜಿಲ್ಲೆಯ ಋಷಿಕೇಶ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಅರಣ್ಯಾಧಿಕಾರಿಗಳು ಮೃತಪಟ್ಟಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದು, ಓರ್ವ ಮಹಿಳಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಮಾಹಿತಿ ಪ್ರಕಾರ, ಸೋಮವಾರ ಸಂಜೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಚೀಲ್ಲಾ ವ್ಯಾಪ್ತಿಯ ರಾಜಾಜಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನದ ಪರೀಕ್ಷಾರ್ಥ ಚಾಲನೆ ನಡೆಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಇದರಿಂದ ಕಾರಿನಲ್ಲಿದ್ದ ರೇಂಜರ್, ಡೆಪ್ಯುಟಿ ರೇಂಜರ್ ಸೇರಿ ನಾಲ್ವರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಈ ವಾಹನದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 10 ಮಂದಿ ಇದ್ದರು ಎಂದು ಹೇಳಲಾಗಿದೆ.
ಮೃತರಲ್ಲಿ ಓರ್ವರನ್ನು ಪಿಎಂಓ ಪ್ರಧಾನ ಕಚೇರಿಯ ಉಪಕಾರ್ಯದರ್ಶಿ ಮಂಗೇಶ್ ಗಿಲ್ಡಿಯಾಲ್ ಅವರ ಸಹೋದರ ಚೀಲಾ ಶೈಲೇಶ್ ಗಿಲ್ಡಿಯಾಲ್ ಎಂದು ಗುರುತಿಸಲಾಗಿದೆ. ಮತ್ತಿತರರನ್ನು ಪ್ರಮೋದ್ ಧ್ಯಾನಿ ಮತ್ತು ಸೈಫ್ ಅಲಿ ಖಾನ್, ಕುಲರಾಜ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನದಿಗೆ ಬಿದ್ದು ಮಹಿಳಾ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ನದಿಯಲ್ಲಿ ಮುಳುಗುತಜ್ಞರ ತಂಡ ಹುಡುಕಾಟ ನಡೆಸುತ್ತಿದೆ.
ಅಪಘಾತದಲ್ಲಿ ಚಾಲಕ ಹಿಮಾಂಶು ಗುಸೇನ್, ರಾಜಾಜಿ ರಾಷ್ಟ್ರೀಯ ಉದ್ಯಾನವನದ ವೈದ್ಯ ರಾಕೇಶ್ ನೌಟಿಯಾಲ್, ಕುಲರಾಜ್ ಸಿಂಗ್, ಅಂಕುಶ್, ಅಮಿತ್ ಸೆಂವಾಲ್ ಮತ್ತು ಅಶ್ವಿನ್ ಎಂಬವರು ಗಾಯಗೊಂಡಿದ್ದು, ಋಷಿಕೇಶ್ನ ಏಮ್ಸ್ಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನೂಪ್ ಮಲಿಕ್, ಎಲೆಕ್ಟ್ರಿಕ್ ವಾಹನದ ಪರೀಕ್ಷಾರ್ಥ ಚಾಲನೆ ವೇಳೆ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಕೂಡಲೇ ಸ್ಥಳಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದರು.
ಇದನ್ನೂ ಓದಿ : ಬೆಂಗಳೂರು: ಓವರ್ ಟೇಕ್ ಮಾಡುವಾಗ ಬಿಎಂಟಿಸಿ ಬಸ್ ಹರಿದು ಯುವಕ ಸಾವು