ಮುಂಬೈ(ಮಹಾರಾಷ್ಟ್ರ): ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಮತ್ತು ಬಂಡಾಯ ಶಾಸಕರ ನಡುವಿನ ಆರೋಪ ಮತ್ತು ಪ್ರತ್ಯಾರೋಪ ಮಹಾರಾಷ್ಟ್ರದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ವಿಶ್ವಾಸ ಮತದ ಮೊದಲು ಎಲ್ಲ ಬಂಡಾಯ ಶಾಸಕರ ಸಹಿಯನ್ನು ಉಪಸಭಾಪತಿಗಳು ಪರಿಶೀಲನೆ ಮಾಡಬೇಕಿದೆ. ಎಲ್ಲ ಪ್ರಕ್ರಿಯಗಳು ಈಗ ಸಂವಿಧಾನ ಬದ್ದವಾಗಿಯೇ ನಡೆಯಬೇಕಾಗುತ್ತದೆ.
ಸದ್ಯ ನಡೆಯುತ್ತಿರುವ ಬೆಳವಣಿಗಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಸಂವಿಧಾನ ತಜ್ಞ ಸುಭಾಷ್ ಕಶ್ಯಪ್, ಅವಿಶ್ವಾಸ ನಿರ್ಣಯ ಮಂಡಿಸುವಂತೆ ಸೂಚಿಸುವ ಹಕ್ಕು ರಾಜ್ಯಪಾಲರಿಗೆ ಮಾತ್ರ ಇದೆ. ಇಲ್ಲವೇ ಸಿಎಂ ತಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎನ್ನಿಸಿದಾಗ ಸ್ವಯಂ ಪ್ರೇರಿತವಾಗಿ ರಾಜ್ಯಪಾಲರ ಒಪ್ಪಿಗೆ ಮೇರೆಗೆ ವಿಶ್ವಾಸಮತ ಯಾಚನೆ ಮಾಡುವ ಹಕ್ಕು ಹೊಂದಿದ್ದಾರೆ.
ರಾಜ್ಯಪಾಲರು ಮಾತ್ರ ಸರ್ಕಾರ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸುವ ಅಧಿಕಾರ ಹೊಂದಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅವರು ಈ ಬಿಕ್ಕಟ್ಟಿನ ಬಗ್ಗೆ ನಿರ್ಧರಿಸುವ ಹಕ್ಕು ಹೊಂದಿರುವುದಿಲ್ಲ. ಪ್ರಸ್ತುತ ಸ್ಪೀಕರ್ ಯಾವುದೇ ಪಾತ್ರವನ್ನು ವಹಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಹಕ್ಕು ರಾಜ್ಯಪಾಲರಿಗೆ ಮಾತ್ರ ಇದೆ ಎಂದು ಕಶ್ಯಪ್ ಹೇಳಿದರು.
ಇನ್ನು ಸ್ಪೀಕರ್ ಯಾರನ್ನಾದರೂ ಅನರ್ಹಗೊಳಿಸಲು ನಿರ್ಧರಿಸಿದರೆ, ಅನರ್ಹಗೊಂಡ ಎಂಎಲ್ಎ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ. ಅಲ್ಲದೇ, ಸ್ವೀಕರ್ ನಿರ್ಣಯದ ವಿರುದ್ಧ ಜಯ ಸಾಧಿಸುವ ಮತ್ತು ಅನರ್ಹತೆಯಿಂದ ಮುಕ್ತನಾಗುವ ನ್ಯಾಯಯುತ ಅವಕಾಶಗಳಿವೆ ಎಂದು ಕಶ್ಯಪ್ ವಿವರಿಸಿದ್ದಾರೆ.
ರಾಜೀನಾಮೆ ನೀಡುವುದು ಅನಿವಾರ್ಯ: ಒಂದು ಸರ್ಕಾರ ಬಹುಮತ ಕಳೆದುಕೊಂಡಾಗ ಮುಖ್ಯಮಂತ್ರಿಗೆ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ. ಇಲ್ಲವೇ ಸದನದಲ್ಲಿ ಬಹುಮತ ಸಾಬೀತು ಮಾಡಬೇಕಾಗುತ್ತದೆ. ಇನ್ನು ಒಂದು ವಿಷಯ ಎಂದರೆ ಸದನದಲ್ಲಿ ಮುಖ್ಯಮಂತ್ರಿ ಬಹುಮತ ಕಳೆದುಕೊಂಡರೆ, ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಂತಾಗುತ್ತದೆ. ಅಂದರೆ ಅವರು ಯಾರನ್ನಾದರೂ ವಜಾ ಮಾಡುವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಕಶ್ಯಪ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಾವು ಉದ್ಧವ್ ಜತೆ ಇದ್ದೇವೆ: ಸದ್ಯದ ಬಿಕ್ಕಟ್ಟಿನ ಬಗ್ಗೆ ಮಾತನಾಡಿರುವ ಎನ್ಸಿಪಿ ನಾಯಕ ಅಜಿತ್ ಪವಾರ್ ನಾವು ಉದ್ದವ್ ಠಾಕ್ರೆ ಜತೆಗೆ ಇದ್ದು ನಮ್ಮ ಬೆಂಬಲ ಅವರಿಗೆ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾ ಅಘಾಡಿ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಬಿಜೆಪಿಗೆ ಶಿವಸೇನೆ ಮೋಸ ಮಾಡಿದೆ: ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಬಿಜೆಪಿಗೆ ಶಿವಸೇನೆ ಮೋಸ ಮಾಡಿದೆ ಎಂದು ಆರೋಪಿಸಿದರು. 2019 ರ ಚುನಾವಣೆಯಲ್ಲಿ ಬಿಜೆಪಿ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಜೊತೆಗೂಡಿ ಶಿವಸೇನೆ ಸ್ಪರ್ಧಿಸಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಶಿವಸೇನೆ, ಪಕ್ಷ ಮತ್ತು ಸಾರ್ವಜನಿಕರಿಗೆ ದ್ರೋಹ ಮಾಡಿದೆ ಎಂದು ಅವರು ದೂರಿದರು.
ಇದನ್ನೂ ಓದಿ:'ಮಹಾ' ಶಾಸಕರು ತಂಗಿರುವ ಹೋಟೆಲ್ನಲ್ಲಿ 7 ದಿನಕ್ಕೆ 70 ರೂಂ ಬುಕ್: ದಿನದ ವೆಚ್ಚವೆಷ್ಟು ಗೊತ್ತಾ?
12 ಶಾಸಕರ ಅನರ್ಹತೆಗೆ ಕೋರಿಕೆ: ಸೇನೆಯಿಂದ ಬಂಡಾಯವೆದ್ದಿರುವ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ. 12 ಮಂದಿಯ ಶಾಸಕ ಸ್ಥಾನವನ್ನ ರದ್ದುಗೊಳಿಸುವಂತೆ ಮನವಿ ಸಲ್ಲಿಕೆಯಾಗಿದೆ. ಶಿವಸೇನೆಯಿಂದ ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್‌ಗೆ ಅನರ್ಹಗೊಳಿಸುವಂತೆ ಮನವಿ ಸಲ್ಲಿಸಲು ಸಜ್ಜಾಗಿದೆ. ಅಲ್ಲದೇ ಏಕನಾಥ್ ಶಿಂಧೆ ಸೇರಿ 12 ಶಾಸಕರ ಅನರ್ಹ ಮಾಡುವಂತೆ ಮನವಿ ಮಾಡಲಾಗಿದೆ.
ಗೊಡ್ಡು ಬೆದರಿಕೆಗೆ ಹೆದರಲ್ಲ: ಇನ್ನೂ ಶಿವಸೇನಾ ನಾಯಕ ಸಂಜಯ್ ರಾವತ್ ಅವರ ಅನರ್ಹತೆಯ ಅಸ್ತ್ರಕ್ಕೆ ನಾವು ಬಗ್ಗಲ್ಲ ಎಂದು ಏಕನಾಥ್ ಶಿಂಧೆ ಬಣ ಟಾಂಗ್ ಕೊಟ್ಟಿದೆ. ನಾವು ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಅನುಯಾಯಿಗಳು. ಹೀಗಾಗಿ 12 ಶಾಸಕರನ್ನ ಅನರ್ಹಗೊಳಿಸುತ್ತೇವೆ ಎಂಬ ನಿಮ್ಮ ಬೆದರಿಕೆಗೆ ನಾವು ಹೆದರಲ್ಲ. ನಮಗೂ ಕಾನೂನು ತಿಳಿದಿದೆ, ಹೀಗಾಗಿ ನಾವು ಯಾವುದೇ ಬೆದರಿಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಎದುರೇಟು ನೀಡಿದ್ದಾರೆ.