ಕೊಚ್ಚಿ (ಕೇರಳ): ಮಹಾರಾಷ್ಟ್ರದ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಇಟ್ಟಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪತಿ ರಾಮ್ ಬಹದ್ದೂರ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಅಕ್ಟೋಬರ್ 24 ರಂದು ಸಂಜೆ ಎರ್ನಾಕುಲಂನ ಗಿರಿನಗರ ಎಂಬಲ್ಲಿನ ಮನೆಯೊಂದರಲ್ಲಿ ಮೃತ ದೇಹ ಪತ್ತೆಯಾಗಿದೆ.ಮಹಿಳೆಯ ಕತ್ತು ಸೀಳಿದ ಬಳಿಕ ಶವವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಹಾಕಲಾಗಿದ್ದು, ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನು ಈ ಮಹಾರಾಷ್ಟ್ರ ಮೂಲದ ದಂಪತಿ ಕಳೆದ ಒಂದು ವರ್ಷದಿಂದ ಈ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕಡವಂತರ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಪತಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಪತಿ, ಪತ್ನಿಯನ್ನು ಕೊಂದು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲದೇ ಈ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಮನೆಯ ಮಾಲೀಕರು ತಿಳಿಸಿದ್ದಾರೆ. ದಂಪತಿಗಳಿಗೆ ಮನೆ ಬಾಡಿಗೆಗೆ ನೀಡಿದಾಗ ಗುರುತಿನ ಚೀಟಿ ಅಥವಾ ಇತರ ಯಾವುದೇ ದಾಖಲೆಗಳನ್ನು ನೀಡಿಲ್ಲ. ಅಲ್ಲದೇ ಮಾಲೀಕರಿಗೆ ನೀಡಿರುವ ವಿಳಾಸವೂ ತಪ್ಪಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾಗಿ ಅವರು ಮನೆ ಮಾಲೀಕರಿಗೆ ಹೇಳಿರುವ ಹೆಸರುಗಳೂ ತಪ್ಪಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ :ಕೊಯಮತ್ತೂರು ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಐವರ ಬಂಧನ: ಇದು ಆತ್ಮಹತ್ಯಾ ದಾಳಿಯೇ?