ಮಹಾರಾಜಗಂಜ್: ಉತ್ತರಪ್ರದೇಶದಲ್ಲಿ ಮನಕಲುಕುವ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಟೆಂಪೋ ಚಲನ್ ಪಾವತಿಸಲು ಎಆರ್‌ಟಿಒ ಕಚೇರಿಗೆ ಆಗಮಿಸಿದ ಯುವಕನ ನೋವಿನ ಕಥೆ ಕೇಳಿ ಅಧಿಕಾರಿಗಳು ಭಾವುಕರಾದ ಪ್ರಸಂಗ ನಗರದಲ್ಲಿ ಕಂಡು ಬಂದಿದೆ. ಅಷ್ಟೇ ಅಲ್ಲ ಆ ಯುವಕನ ಚಲನ್ ಅನ್ನು ಸಹ ತಾವೇ ತಮ್ಮ ಹಣದಿಂದ ಕಟ್ಟಿರುವ ಘಟನೆ ಪುರಂದರಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಏನಿದು ಘಟನೆ: ಪುರಂದರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗ್‌ಪುರ ತಾಲ್ಹಿ ಗ್ರಾಮದ ವಿಜಯ್‌ಕುಮಾರ್ ಅವರ ತಂದೆ ರಾಜ್ಕುಮಾರ್ ಟೆಂಪೋ ಚಲಾಯಿಸುತ್ತಾರೆ. ರಾಜ್ಕುಮಾರ್ ದಂಪತಿಗೆ ವಿಜಯ್‌ಕುಮಾರ್ ಒಬ್ಬನೇ ಗಂಡು ಮಗ, ಆರು ಹೆಣ್ಮಕ್ಕಳಿದ್ದಾರೆ. ಆದರೆ, ರಾಜ್ಕುಮಾರ್ಗೆ ಒಂದು ಕಣ್ಣು ಕಾಣುವುದಿಲ್ಲ. ಅವರ ದುಡಿಮೆಯಲ್ಲಿ ಇಡೀ ಕುಟುಂಬ ಜೀವಿಸುತ್ತಿದೆ. ಜೂ.8ರಂದು ಆರ್ಟಿಒ ಅಧಿಕಾರಿಗಳು ವಿವಿಧ ಕಾರಣಕ್ಕಾಗಿ ಸುಮಾರು 24,500 ರೂಪಾಯಿ ಟೆಂಪೋದ ಚಲನ್ ಅನ್ನು ಹರಿದು ರಾಜ್ಕುಮಾರ್ ವಾಹನವನ್ನು ವಶಪಡಿಸಿಕೊಂಡಿದ್ದರು.
ತಾಯಿಯ ಮಂಗಳಸೂತ್ರ ಮಾರಿದ ಮಗ: ಕಳೆದ ಏಳೆಂಟು ದಿನಗಳಿಂದ ವಿಜಯ್ ಕುಟುಂಬ ಟೆಂಪೋ ಬಿಡಿಸಿಕೊಳ್ಳು ಹಣಕ್ಕಾಗಿ ಅಲೆದಾಡಿದ್ದಾರೆ. ಆದರೂ ಹಣ ಎಲ್ಲೂ ಹೊಂದಾಣಿಕೆಯಾಗಿಲ್ಲ. ಹೀಗಾಗಿ ವಿಜಯ್ ತಮ್ಮ ತಾಯಿ ಮಂಗಳಸೂತ್ರ ಮಾರಿ 13 ಸಾವಿರ ರೂಪಾಯಿಯನ್ನು ಹೊಂದಿಸಿದ್ದಾರೆ. ಬಳಿಕ ಟೆಂಪೋ ಚಲನ್ ಮೊತ್ತವನ್ನು ಕಟ್ಟಲು ವಿಜಯ್ ಗುರುವಾರ ಎಆರ್‌ಟಿಒ ಕಚೇರಿಗೆ ತೆರಳಿದ್ದರು. ಈ ವೇಳೆ ವಿಜಯನನ್ನು ಎಆರ್‌ಟಿಒ ಆರ್‌ಸಿ ಭಾರತೀಯ ಠಾಣೆಗೆ ಬಂದ ಕಾರಣ ಕೇಳಿದ್ದರು.
ಓದಿ: ಅಪಘಾತದಲ್ಲಿ ಗಾಯಗೊಂಡ ಮಹಿಳೆ.. ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಂಸದ
ನೋವು ತೋಡಿಕೊಂಡ ಯುವಕ: ನಮ್ಮ ತಂದೆಯ ಟೆಂಪೋವನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಹಣ ಹೊಂದಿಸಲು ಸಾಕಷ್ಟು ಪ್ರಯತ್ನ ಪಡೆಲಾಯಿತು. ಹಣ ಹೊಂದಾಣಿಕೆಯಾಗದ ಹಿನ್ನೆಲೆ ತಾಯಿಯ ಮಂಗಳಸೂತ್ರ ಮಾರಾಟ ಮಾಡಿ 13 ಸಾವಿರ ರೂಪಾಯಿ ಜಮಾಯಿಸಲಾಗಿದೆ. ನಾನು ಸಹ ಕೆಲಸಕ್ಕೆ ಹೋಗಿ ತಂದೆಗೆ ಸಹಾಯವಾಗುತ್ತಿದ್ದ ಕಾರಣ ಹೈಸ್ಕೂಲ್ ಅನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ಕುಟುಂಬದಲ್ಲಿ ಆರು ಸಹೋದರಿಯರು ಇದ್ದಾರೆ. ಒಬ್ಬ ಸಹೋದರಿ ಈಗಷ್ಟೇ ಮದುವೆಯಾಗಿದ್ದಾಳೆ. 13 ಸಾವಿರ ಹೊರತುಪಡಿಸಿ ಉಳಿದ ಮೊತ್ತವನ್ನು ಮನ್ನಾ ಮಾಡಬೇಕಾಗಿ ತಮ್ಮ ಮನವಿ ಮಾಡಿಕೊಳ್ಳುತ್ತೇನೆ. ಇಲ್ಲವಾದಲ್ಲಿ ತಂದೆ ತೋಟವನ್ನು ಮಾರಿ ಹಣ ನೀಡಲಿದ್ದಾರೆ ಎಂದು ವಿಜಯ್ ಎಆರ್‌ಟಿಒ ಅಧಿಕಾರಿಗೆ ದುಃಖಿಸುತ್ತಾ ತನ್ನ ನೋವು ಹೇಳಿಕೊಂಡಿದ್ದಾರೆ.
ಭಾವುಕರಾದ ಅಧಿಕಾರಿ: ವಿಜಯ್ ಕಥೆ ಕೇಳಿ ಎಆರ್‌ಟಿಒ ಆರ್‌ಸಿ ಭಾರತೀಯ ಭಾವುಕರಾದರು. ವಿಜಯ್‌ಗೆ ನಿರಾಶರಾಗಬೇಡಿ ಎಂದು ಹೇಳಿ ಚಲನ್‌ನ ಸಂಪೂರ್ಣ ಮೊತ್ತವನ್ನು ಅವರೇ ಕಟ್ಟಿದ್ದರು. ಜೊತೆ ಟೆಂಪೋಗೆ 8 ಸಾವಿರ ಮೊತ್ತದ ಇನ್ಸ್ಯೂರೆನ್ಸ್ ಸಹ ಮಾಡಿಕೊಟ್ಟರು. ಅಷ್ಟೇ ಅಲ್ಲದೇ ARTO ಅವರು ವಿಜಯ್‌ಗೆ 17 ಸಾವಿರ ನಗದು ಮೊತ್ತವನ್ನು ನೀಡಿ ಚೆನ್ನಾಗಿ ಓದಿಕೊಳ್ಳಿ ಎಂದರು.
ಅಷ್ಟೇ ಅಲ್ಲ ನೀನು ತಂದ ಹಣವನ್ನು ವಾಪಸ್ ಚಿನ್ನಾಭರಣ ವ್ಯಾಪಾರಿಗೆ ನೀಡಿ ಮಂಗಳಸೂತ್ರವನ್ನು ಬಿಡಿಸಿಕೊಳ್ಳಿ. ಬಳಿಕ ನಿಮ್ಮ ತಾಯಿಗೆ ತಾಳಿಯನ್ನು ವಾಪಸ್ ಕೊಡಿ. ಹೊಲವನ್ನು ಮಾರಬೇಡಿ ಎಂದು ನಿಮ್ಮ ತಂದೆಗೆ ಹೇಳಿ. ನಿಮ್ಮ ಸಹೋದರಿಯರ ಮದುವೆಗೆ ಸಹಾಯ ಬೇಕಾದರೆ ನನ್ನನ್ನು ಸಂಪರ್ಕಿಸಿ ಎಂದು ಯುವಕನಿಗೆ ತಮ್ಮ ಮೊಬೈಲ್ ನಂಬರ್ ಕೊಟ್ಟು ಕಳುಹಿಸಿದರು.
ಎಲ್ಲೆಡೆ ಚರ್ಚೆಯಾದ ಮಾನವೀಯ ಹೆಜ್ಜೆ: ಎಆರ್‌ಟಿಒ ಆರ್‌ಸಿ ಭಾರತೀಯ ಅವರ ಔದಾರ್ಯ ಹಾಗೂ ಯುವಕನಿಗೆ ಸಹಾಯ ಮಾಡಿದನ್ನು ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿ ಹಾಗೂ ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ARTOದ ಮಾನವೀಯ ಕಾರ್ಯವು ಇಡೀ ಇಲಾಖೆ ಮತ್ತು ಸಮಾಜದಲ್ಲಿ ಚರ್ಚೆಯಾಗುತ್ತಿದೆ. ಎಆರ್‌ಟಿಒ ಅವರು ಅತ್ಯಂತ ಸಭ್ಯರು ಮತ್ತು ಎಲ್ಲರಿಗೂ ಸಹಾಯ ಮಾಡುತ್ತಾರೆ ಎಂದು ಇಲಾಖೆಯ ಜನರು ಹೇಳುತ್ತಾರೆ. ಈ ಹಿಂದೆಯೂ ಅವರು ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ ಮತ್ತು ಅದನ್ನು ಮುಂದುವರೆಸಿದ್ದಾರೆ ಎಂದು ಸಿಬ್ಬಂದಿಯರ ಮಾತಾಗಿದೆ.
ಅಧಿಕಾರಿ ಮನದ ಮಾತು: ಎಆರ್‌ಟಿಒ ಆರ್‌ಸಿ ಭಾರತೀಯ ಮಾತನಾಡಿ, ನಾವೆಲ್ಲರೂ ಪರಸ್ಪರರ ಅಸಹಾಯಕತೆ ಅರ್ಥಮಾಡಿಕೊಳ್ಳಬೇಕು ಮತ್ತು ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂದ ಹೇಳಿದರು. ಕಚೇರಿಗೆ ಬಂದ ಯುವಕನ ತಂದೆ ಕಾನೂನು ನಿಯಮವನ್ನು ಉಲ್ಲಂಘಿಸಿದ್ದರು. ಆ ಸಮಯದಲ್ಲಿ ನಾವು ನಮ್ಮ ಇಲಾಖೆಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇವೆ. ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ನಮ್ಮ ಕೆಲಸವನ್ನು ಮಾಡಿದ್ದೇವೆ. ಇದೇ ವೇಳೆ, ಯುವಕ ತನ್ನ ತಾಯಿಯ ಮಂಗಳಸೂತ್ರವನ್ನು ಮಾರಿ ಹಣ ತುಂಬಲು ಬಂದಿರುವುದಾಗಿ ತಿಳಿಸಿದಾಗ ನಾವು ಮಾನವೀಯತೆ ಮೆರೆದು ಅವರಿಗೆ ಸಹಾಯ ಮಾಡಿದ್ದೇವೆ. ಈ ಕೆಲಸ ಎಲ್ಲರಿಂದಲೂ ಆಗಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಹೇಳಿದರು.