ಅಯೋಧ್ಯ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಭ್ರಷ್ಟತೆಯಿಂದ ಕೂಡಿದೆ ಎಂದು ಮಹಂತ್ ಧರ್ಮದಾಸ್ ಆರೋಪಿಸಿದ್ದಾರೆ. ಇಲ್ಲಿಯವರೆಗೆ, ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಭೂ ಖರೀದಿ ಪ್ರಕರಣದಲ್ಲಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು.
ಈಗ ಅಯೋಧ್ಯೆಯ ಅನೇಕ ಹಿರಿಯ ಸಂತರು ಸಹ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಯಾವುದೇ ತಪ್ಪಿಲ್ಲದಿದ್ದರೆ, ತನಿಖೆ ನಡೆಸಲು ಏನು ಸಮಸ್ಯೆ ಎಂದು ಶ್ರೀ ರಾಮ್ ಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣದಲ್ಲಿ ಪಕ್ಷವಾಗಿ ಹಲವಾರು ದಶಕಗಳ ಕಾಲ ಹೋರಾಡಿದ ದಿವಂಗತ ಮಹಂತ್ ಅಭಿರಾಮ್ ದಾಸ್ ಅವರ ಶಿಷ್ಯ, ನಿರ್ವಾಣಿ ಅಖಾರದ ಸನ್ಯಾಸಿ ಮಹಂತ್ ಧರ್ಮದಾಸ್ ಕೇಳುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಹಂತ್ ಧರ್ಮದಾಸ್ ಭಗವಾನ್ ರಾಮನ ಹೆಸರಿನಲ್ಲಿ ದೇಣಿಗೆ ನೀಡಿದ ಹಣವನ್ನು ಅನಿಯಂತ್ರಿತವಾಗಿ ಬಳಸಲಾಗುತ್ತಿದೆ, ಟ್ರಸ್ಟ್‌ನ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಇದರ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ರು.
ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸುವ ಮೂಲಕ ಮೊದಲು ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ, ನಂತರ ಅವುಗಳನ್ನು ನೆಲಸಮ ಮಾಡಲಾಗುತ್ತಿದೆ. ಇವೆಲ್ಲವೂ ತಪ್ಪು. ಟ್ರಸ್ಟ್ ಅನ್ನು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮಾಡಲಾಗಿಲ್ಲ. ಈ ಜನರು ಪರಸ್ಪರ ಒಪ್ಪಂದದ ಆಧಾರದ ಮೇಲೆ ತಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದಾರೆ. ಟ್ರಸ್ಟ್‌ನ ಜನರು ತಮ್ಮ ಲಾಭಕ್ಕಾಗಿ ತಮ್ಮ ಮನಸ್ಸಿಗೆ ಅನುಗುಣವಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ರು.
ರಾಮ್‌ಲಾಲಾಗೆ ದೇಣಿಗೆ ನೀಡಿದ ಹಣದಿಂದ ಟ್ರಸ್ಟ್ ಏನು ಮಾಡಲಿದೆ ಎಂದು ಅಯೋಧ್ಯೆಯ ಜನರು ಮತ್ತು ರಾಮನ ಭಕ್ತರು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ನಿರ್ವಾಣಿ ಅಖಾರದ ಧರ್ಮದಾಸ್ ಹೇಳಿದರು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಭೂಮಿ ಖರೀದಿಸುವ ವಿಷಯ ವಿವಾದ ಮುನ್ನಲೆಗೆ ಬಂದಿದ್ದು, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಭೂ ಖರೀದಿಯಲ್ಲಿ ಕೋಟ್ಯಂತರ ಹಗರಣದ ಆರೋಪ ಮಾಡಿದ್ದರು.
2 ಕೋಟಿ ಮೌಲ್ಯದ ಭೂಮಿಯನ್ನು 18 ಕೋಟಿಗೆ ಖರೀದಿಸಲಾಗಿದೆ ಎಂದು ಹೇಳಲಾಗಿತ್ತು. ನಂತರ, ಎಸ್‌ಪಿ ನಾಯಕ ಪವನ್ ಪಾಂಡೆ ಅವರು ಸಂಜಯ್ ಸಿಂಗ್ ಅವರ ಆರೋಪಗಳಿಗೆ ಹೌದು ಎಂದು ಹೇಳಿದರು.ಆಗ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರತಿಕ್ರಿಯಿಸಿ ಅಂತಹ ಆರೋಪಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ರು.