ಪಾಟ್ನಾ: ಬಿಹಾರದಲ್ಲಿ ತನಗೆ ನ್ಯಾಯಯುತವಾದ ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಬಿಟ್ಟುಕೊಡುವುದರಿಂದ ಕಾಂಗ್ರೆಸ್ ಪಕ್ಷದ ಮೇಲೆ ಮಾತ್ರವಲ್ಲದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದಂತೆ ಇಡೀ ಆಡಳಿತಾರೂಢ ಮಹಾಘಟಬಂಧನದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ 40 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ಗೆ ಕೇವಲ ನಾಲ್ಕು ಸ್ಥಾನ ಮಾತ್ರ ಬಿಟ್ಟುಕೊಡುವ ಬಗ್ಗೆ ಚರ್ಚೆಗಳು ನಡೆದಿರುವ ಬಗ್ಗೆ ಕೇಳಿದಾಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
"ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಜೆಡಿಯು ಸೇರಿದಂತೆ ಒಟ್ಟಾರೆಯಾಗಿ ಮಹಾಘಟಬಂಧನ್ಗೆ ತೊಂದರೆಯಾಗಲಿದೆ. ಅಲ್ಲದೆ 2019ರಲ್ಲಿ ನಾವು ಒಂಭತ್ತು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದ್ದೆವು ಎಂಬ ಕಾರಣಕ್ಕೆ ನಮಗೆ ಈ ಬಾರಿಯೂ ಅಷ್ಟೇ ಸ್ಥಾನಗಳನ್ನು ಬಿಟ್ಟುಕೊಡುತ್ತೇವೆ ಎನ್ನುವುದು ಸೂಕ್ತವಲ್ಲ" ಎಂದು ಸಿಂಗ್ ಹೇಳಿದರು.
ಐದು ವರ್ಷಗಳ ಹಿಂದೆ ಜೆಡಿಯು 17 ಸ್ಥಾನಗಳಲ್ಲಿ ಸ್ಪರ್ಧಿಸಿ 16ರಲ್ಲಿ ಗೆದ್ದಿತ್ತು. ಈ ಬಾರಿ ಆ ಎಲ್ಲ 17 ಸ್ಥಾನಗಳನ್ನು ಜೆಡಿಯು ಬಯಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಲೋಕಸಭೆಯಲ್ಲಿ ಪ್ರಸ್ತುತ 16 ಸಂಸದರನ್ನು ಹೊಂದಿರುವ ಜೆಡಿಯು ಅದಕ್ಕಿಂತ ಕಡಿಮೆ ಸ್ಥಾನಗಳಿಗೆ ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ನಿತೀಶ್ ಕುಮಾರ್ ಅವರ ಆಪ್ತ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.
"ನಾವು ಇವಾಗ 16 ಸ್ಥಾನಗಳನ್ನು ಹೊಂದಿದ್ದೇವೆ. ಈ ಸ್ಥಾನಗಳು ನಮಗೆ ಸಿಗುವ ಬಗ್ಗೆ ಯಾವುದೇ ಗೊಂದಲ ಉದ್ಭವಿಸಬಾರದು" ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಝಾ ಹೇಳಿದ್ದಾರೆ. "ಕಾಂಗ್ರೆಸ್ನ ಬೇಡಿಕೆ ಏನೇ ಇದ್ದರೂ ಅದನ್ನು ಆರ್ಜೆಡಿಗೆ ತಿಳಿಸಬೇಕು. ಸೀಟು ಹಂಚಿಕೆಯ ಬಗ್ಗೆ ಅಂತಿಮವಾಗಿ ಆರ್ಜೆಡಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ಝಾ ತಿಳಿಸಿದರು.
ಎರಡು ವರ್ಷಗಳ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡ ನಂತರ ಮಹಾಘಟಬಂಧನ್ಗೆ ಪ್ರವೇಶಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮೈತ್ರಿಕೂಟದ ಹೊಸ ಸದಸ್ಯನಾಗಿರುವುದರಿಂದ, ಮೈತ್ರಿಕೂಟದ ಅತಿದೊಡ್ಡ ಪಕ್ಷವಾದ ಆರ್ಜೆಡಿ ಇತರ ಸಣ್ಣ ಪಕ್ಷಗಳ ಪರವಾಗಿ ಮಾತುಕತೆ ನಡೆಸಲು ಅವಕಾಶ ನೀಡಬೇಕೆಂಬುದು ಮೈತ್ರಿಕೂಟದ ಅಲಿಖಿತ ಸಾಮಾನ್ಯ ತಿಳುವಳಿಕೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಝಾ ಅವರ ಹೇಳಿಕೆಯನ್ನು ನೋಡಬೇಕಾಗುತ್ತದೆ.
ಸಿಪಿಐ (ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರು ಕೆಲವು ಸಮಯದ ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ್ದು, ತಮ್ಮ ಪಕ್ಷ ಬಯಸಿದ ಸ್ಥಾನಗಳ ಸಂಖ್ಯೆಯನ್ನು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ತಿಳಿಸಲಾಗಿದೆ. ಅವರು ಜೆಡಿಯು ಸೇರಿದಂತೆ ಇತರ ಸಣ್ಣ ಪಕ್ಷಗಳ ಜೊತೆ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು.
ಜೆಡಿಯು ಮತ್ತು ಆರ್ಜೆಡಿ ಎರಡೂ ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದರೆ ಕಾಂಗ್ರೆಸ್, ಸಿಪಿಐ (ಎಂಎಲ್) ಎಲ್, ಸಿಪಿಐ ಮತ್ತು ಸಿಪಿಐ (ಎಂ) ಉಳಿದ ಆರು ಸ್ಥಾನಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ದೆಹಲಿ ತಲಾ ಆದಾಯ ಹೆಚ್ಚಳ; ಸರ್ಕಾರದ ಸಾಧನೆ ಕೊಂಡಾಡಿದ ಸಿಎಂ ಕೇಜ್ರಿವಾಲ್