ಮಧುರೈ(ತಮಿಳುನಾಡು): ಪ್ರೇಮಕ್ಕೆ ದೇಶ, ಭಾಷೆ, ಸಂಸ್ಕೃತಿಗಳೆಂಬ ಗಡಿಗಳಿಲ್ಲ. ಪ್ರೀತಿ ಹುಟ್ಟಿತೆಂದರೆ ಸಾಕು ಅದು ಯಾರಿಗೂ ಹೆದರಲ್ಲ. ಅದಕ್ಕೆ ಮತ್ತೊಂದು ಉದಾಹರಣೆ ಎಂಬ ರೀತಿಯಲ್ಲಿ ತಮಿಳುನಾಡಿನ ಹುಡುಗನೋರ್ವ ಇಂಗ್ಲಿಷ್ ಹುಡುಗಿ ಕೈಹಿಡಿದಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಗ್ಲೇನ್ ಮ್ಯಾಕ್ಸ್ವೆಲ್ ಚೆನ್ನೈ ಮೂಲದ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಭಾರತೀಯನೋರ್ವ ಇಂಗ್ಲೆಂಡ್ ಯುವತಿ ಜೊತೆ ಸಪ್ತಪದಿ ತುಳಿದಿದ್ದಾರೆ. ಮಧುರೈನಲ್ಲಿ ನಡೆದ ಆರತಕ್ಷತೆಯಲ್ಲಿ ನವ ಇಂಡೋ-ಆಂಗ್ಲೋ ಜೋಡಿ ಕಂಗೊಳಿಸಿತು.
ಇದನ್ನೂ ಓದಿ: ಅಮೆರಿಕದಲ್ಲಿ ಉಬರ್ ಕ್ಯಾಬ್ ಚಾಲಕನಾಗಿ ಬದುಕು ಸಾಗಿಸುವ ಅಘ್ಘಾನಿಸ್ತಾನದ ಮಾಜಿ ಹಣಕಾಸು ಸಚಿವ!
ಮಧುರೈನ ಸ್ಯಾಮ್ ಡೇವಿಡ್ ಇಂಗ್ಲೆಂಡ್ನಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡ್ತಿದ್ದು, ಅಲ್ಲಿನ ಸಾರಾ ಎಲಿಜಬೆತ್ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದರು. ಈ ಜೋಡಿ ಕಳೆದ ವರ್ಷ 2021ರ ಮೇ ತಿಂಗಳಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಕೋವಿಡ್ನಿಂದಾಗಿ ಈ ಜೋಡಿ ತಮಿಳುನಾಡಿಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿರುವ ಕಾರಣ ಭಾರತಕ್ಕೆ ವಾಪಸ್ ಆಗಿದ್ದು, ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಸಸಿ ನೀಡಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿರುವ ಎಲಿಜಬೆತ್, ಭಾರತೀಯರು ಪ್ರೀತಿಪಾತ್ರರು. ನಾನು ತಮಿಳುನಾಡಿನ ಸಂಸ್ಕೃತಿ ಹಾಗೂ ಇಲ್ಲಿನ ಸಂಪ್ರದಾಯಕ್ಕೆ ಫಿದಾ ಆಗಿದ್ದೇನೆ ಎಂದಿದ್ದಾರೆ.