ಗುವಾಹಟಿ (ಅಸ್ಸೋಂ): ಅಸ್ಸೋಂನಲ್ಲಿ ಭಯೋತ್ಪಾದಕ ನಂಟು ಆರೋಪದ ಮೇಲೆ ಮದರಸಾವೊಂದನ್ನು ಬುಲ್ಡೋಜರ್‌ಗಳ ಮೂಲಕ ಧ್ವಂಸಗೊಳಿಸಲಾಗಿದೆ. ಇಂದು ಬೆಳಗ್ಗೆ ಬೊಂಗೈಗಾಂವ್ ಜಿಲ್ಲೆಯ ಜೋಗಿಘೋಪಾ ಪ್ರದೇಶದ ಕಬೈತರಿಯಲ್ಲಿರುವ ಮರ್ಕಝುಲ್ ಮಆರಿಫ್-ಉ-ಕರಿಯಾನ ಮದರಸಾವನ್ನು ಜಿಲ್ಲಾಡಳಿತ ನೆಲಸಮಗೊಳಿಸಿತು.
ಆಪಾದಿತ ಭಯೋತ್ಪಾದಕ ಚಟುವಟಿಕೆಗಳನ್ನು ವಿಫಲಗೊಳಿಸುವ ಭಾಗವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ಮಂಗಳವಾರವೇ ಮದರಸಾ ಪ್ರಾಧಿಕಾರಕ್ಕೆ ನೋಟಿಸ್ ನೀಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನೀಲ್ ದೇಕಾ ಮಾಹಿತಿ ನೀಡಿದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ಎಂಟು ಬುಲ್ಡೋಜರ್‌ಗಳು ಧ್ವಂಸ ಕಾರ್ಯ ನಡೆಸಿದವು.
ಮದರಸಾದಲ್ಲಿ 200 ವಿದ್ಯಾರ್ಥಿಗಳಿದ್ದರು. ಕಾರ್ಯಾಚರಣೆಗೆ ಮುನ್ನವೇ ಬಹುಪಾಲು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿತ್ತು. ಮತ್ತೆ ಕೆಲವರು ಮದರಸಾ ಆವರಣದಲ್ಲಿ ಉಳಿದುಕೊಂಡಿದ್ದರು. ನೆಲಸಮ ಕಾರ್ಯಕ್ಕೂ ಮೊದಲು ಅವರನ್ನು ಹತ್ತಿರದ ಸಂಸ್ಥೆಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.
ಇದನ್ನೂ ಓದಿ: ಅಸ್ಸೋಂನಲ್ಲಿ 10 ಜಿಹಾದಿ ಗುಂಪುಗಳ ಸದಸ್ಯರ ಬಂಧನ
ಗೋಲ್ಪಾರಾ ಜಿಲ್ಲೆಯಲ್ಲಿ ಈ ಹಿಂದೆ ಇಬ್ಬರು ಇಮಾಮ್‌ಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಇದೇ ಮದರಸಾದ ಶಿಕ್ಷಕ ಹಫೀಜುರ್ ರೆಹಮಾನ್ ಎಂಬುವವರನ್ನು ಆಗಸ್ಟ್ 26ರಂದು ಬಂಧಿಸಲಾಗಿತ್ತು. ಆರೋಪಿ ರೆಹಮಾನ್ ಮತ್ತು ಇಬ್ಬರು ಇಮಾಮ್‌ಗಳು ಉಗ್ರ ಸಂಘಟನೆಗಳಾದ ಅಲ್-ಖೈದಾ (ಎಕ್ಯೂಐಎಸ್) ಮತ್ತು ಅನ್ಸಾರುಲ್ಲಾ ಬಾಂಗ್ಲಾ ತಂಡ (ಎಬಿಟಿ)ದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಮದರಸಾದಲ್ಲಿ ಶೋಧ ನಡೆಸಿದಾಗ ಕೆಲವು ದಾಖಲೆಗಳು ಸಹ ಕಂಡು ಬಂದಿವೆ ಎಂದು ಅವರು ವಿವರಿಸಿದರು.
ಅಕ್ರಮವಾಗಿ ಮದರಸಾ ನಿರ್ಮಾಣ: ನೆಲಸಮ ಕಾರ್ಯಾಚರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್ಪಿ, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಮದರಸಾವನ್ನು ನಿರ್ಮಿಸಲಾಗಿದೆ. ಜೊತೆಗೆ ಕಟ್ಟಡಕ್ಕೆ ಅಗತ್ಯ ಅನುಮತಿಗಳನ್ನೂ ಪಡೆದಿಲ್ಲ. ಆದ್ದರಿಂದ, ವಿಪತ್ತು ನಿರ್ವಹಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಕೆಡವಲಾಯಿತೆಂದು ತಿಳಿಸಿದರು. ಭಯೋತ್ಪಾದಕ ನಂಟು ಸಂಬಂಧ ಕಳೆದ ಐದು ತಿಂಗಳಲ್ಲಿ ಅಸ್ಸೋಂ ಪೊಲೀಸರು ಸುಮಾರು 40 ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅಸ್ಸೋಂನಲ್ಲಿ ಮತ್ತೊಂದು ಮದರಸಾ ನೆಲಸಮ: ಪ್ರಾಂಶುಪಾಲರ ಬಂಧನ