ಚೆನ್ನೈ (ತಮಿಳುನಾಡು): ಆನ್‌ಲೈನ್ ಗೇಮ್ಗಳಾದ ರಮ್ಮಿ ಮತ್ತು ಪೋಕರ್ ಮೇಲೆ ತಮಿಳುನಾಡು ಸರ್ಕಾರ ವಿಧಿಸಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ. ಜೂಜಿನ ಗೇಮ್ಗಳ ಮೇಲೆ ನಿಷೇಧ ಹೇರಬಹುದೇ ವಿನಹಃ, ಕೌಶಲ್ಯ ಆಧರಿತ ಆಟಗಳಾದ ರಮ್ಮಿ, ಪೋಕರ್ನಂತಹ ಆನ್‌ಲೈನ್ ಗೇಮ್ಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಇದೇ ವೇಳೆ ಅಭಿಪ್ರಾಯಪಟ್ಟಿದೆ.
ರಮ್ಮಿ ಮತ್ತು ಪೋಕರ್‌ಗಳ ಮೇಲೆ ನಿಷೇಧ ಹೇರಿದ್ದನ್ನು ಆನ್‌ಲೈನ್ ಕಂಪನಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದವು. ಮುಖ್ಯ ನ್ಯಾಯಮೂರ್ತಿ ಸಂಜಯ್ ವಿಜಯ್‌ಕುಮಾರ್ ಗಂಗಾಪುರವಾಲ ಮತ್ತು ನ್ಯಾಯಮೂರ್ತಿ ಆದಿಕೇಶವಲು ಅವರ ಪೀಠವು ಸೆಪ್ಟೆಂಬರ್ 5 ರಂದು ವಿಚಾರಣೆ ಪೂರ್ತಿಗೊಳಿಸಿ ತೀರ್ಪು ಕಾಯ್ದಿರಿಸಿದ್ದರು. ಇಂದು ಅಂತಿಮ ತೀರ್ಪನ್ನು ಪ್ರಕಟಿಸಲಾಯಿತು.
ಕೌಶಲ್ಯ ಆಧರಿತ ಗೇಮ್ಗಳು: ತಮಿಳುನಾಡು ಸರ್ಕಾರ, ಜೂಜು ಎಂದು ಪರಿಗಣಿಸಿ ಪೋಕರ್ ಮತ್ತು ರಮ್ಮಿ ಆನ್‌ಲೈನ್ ಗೇಮ್ಗಳನ್ನು ರಾಜ್ಯದಲ್ಲಿ ನಿಷೇಧ ಮಾಡಿದೆ. ಇವು ಬಳಕೆದಾರರನ್ನು ಸಾಲದ ಸುಳಿಗೆ ಸಿಲುಕಿಸಿ ಪ್ರಾಣ ಹಾನಿಗೂ ಕಾರಣವಾಗಿವೆ ಎಂದು ಹೇಳಿತ್ತು. ಇದರ ವಿರುದ್ಧ ಮುಂಬೈ ಮೂಲದ ಆನ್‌ಲೈನ್ ಗೇಮಿಂಗ್ ಕಂಪನಿಗಳು ಹೈಕೋರ್ಟ್ನಲ್ಲಿ ಚಾಲೆಂಜ್ ಮಾಡಿದ್ದವು. ರಮ್ಮಿ ಕೌಶಲ್ಯದ ಆಟ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಇದು ಜೂಜಾಟವಲ್ಲ, ಹೀಗಾಗಿ ನಿಷೇಧ ತೆರವು ಮಾಡಬೇಕು ಎಂದು ಕೋರಲಾಗಿತ್ತು.
ತೀರ್ಪಿಗೆ ಸ್ವಾಗತ: ತೀರ್ಪಿನ ಕುರಿತು ಹರ್ಷ ವ್ಯಕ್ತಪಡಿಸಿದ ಇ-ಗೇಮಿಂಗ್ ಫೆಡರೇಶನ್ (ಇಜಿಎಫ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಸಕ್ಸೇನಾ, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವೆ. ಈ ತೀರ್ಪು ಕಾನೂನುಬದ್ಧ ಆನ್‌ಲೈನ್ ಸ್ಕಿಲ್ ಗೇಮಿಂಗ್ ಉದ್ಯಮಕ್ಕೆ ಸಿಕ್ಕ ಗೆಲುವಾಗಿದೆ. ಸ್ಕಿಲ್ ಗೇಮ್ಗಳ ಮೇಲೆ ವಿಧಿಸಲಾಗುವ ನಿರ್ಬಂಧಗಳನ್ನು ಸಂವಿಧಾನಾತ್ಮಕವಾಗಿ ನ್ಯಾಯಾಲಯಗಳು ಪದೇ ಪದೆ ತೆರವು ಮಾಡಿದೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ. ಗೇಮ್ಗಳ ಪ್ರಗತಿಗೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
ಇಂತಹ ಆನ್‌ಲೈನ್ ಗೇಮ್ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ಮತ್ತು ಆದಾಯ ಮೂಲಗಳು ಎಂದು ಪರಿಗಣಿಸಿವೆ. ಕೋರ್ಟ್ನ ಇಂದಿನ ತೀರ್ಪು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ. ರಾಜ್ಯ ಸರ್ಕಾರಗಳು ಹೆಚ್ಚು ಗೇಮ್ಗಳ ಮೇಲಿನ ನೀತಿ ನಿರೂಪಣೆಗಳನ್ನು ವಾಸ್ತವಿಕವಾಗಿ ರೂಪಿಸಲು ಇದು ನೆರವಾಗಲಿದೆ ಎಂದು ಹೇಳಿದರು.
ಸರ್ಕಾರ ಗೇಮ್ ಬ್ಯಾನ್ ಮಾಡಿದ್ದೇಕೆ?: ಪೋಕರ್ ಮತ್ತು ರಮ್ಮಿ ಆನ್‌ಲೈನ್ ಗೇಮ್ನಿಂದಾಗಿ ರಾಜ್ಯದಲ್ಲಿ ಅನೇಕ ಯುವಕರು ಸಾಲದ ಸುಳಿಗೆ ಸಿಲುಕಿದ್ದಾರೆ. ಹಣ ಪಾವತಿ ಮಾಡಲಾಗದೇ, ಈವರೆಗೆ 30 ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇವುಗಳು ಸ್ವಸ್ಥ ಸಮಾಜಕ್ಕೆ ಅಪಾಯಕಾರಿ ಎಂದು ತಮಿಳುನಾಡು ಸರ್ಕಾರ ಗೇಮ್ಗಳಿಗೆ ರಾಜ್ಯದಲ್ಲಿ ನಿರ್ಬಂಧ ಹೇರಿತ್ತು.
ಆನ್‌ಲೈನ್ ಗೇಮ್ ಸಂಸ್ಥೆಯ ವಾದ: ಆನ್‌ಲೈನ್ ಗೇಮಿಂಗ್ ಕಂಪನಿಗಳ ಸಂಘವು, ತಮಿಳುನಾಡು ಸರ್ಕಾರ ನಿಷೇಧಿಸಿದ ಗೇಮ್ಗಳು ಕೌಶಲ್ಯ ಆಧಾರಿತ ಆಟವಾಗಿವೆ. ಇವು ಜೂಜಾಟದಂತಲ್ಲ ಎಂದು ವಾದಿಸಿದೆ. ಆಟದಲ್ಲಿ ಪಂತ ಕಟ್ಟುವುದು ಜೂಜು, ಇವು ಬಳಕೆದಾರರ ಬುದ್ಧಿಮತ್ತೆಯನ್ನು ಆಧರಿಸಿ ಆಡಬೇಕು. ಹೀಗಾಗಿ ನಿಷೇಧ ತಪ್ಪು ಎಂದು ವಾದಿಸಿವೆ.
ಜೊತೆಗೆ ರಾಜ್ಯ ಸರ್ಕಾರಗಳು ಆನ್‌ಲೈನ್ ಆಟಗಳನ್ನು ನಿಯಂತ್ರಿಸಬಹುದು, ಆದರೆ, ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಗೇಮಿಂಗ್ ಕಂಪನಿಗಳು ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸುತ್ತವೆ. ತೆರಿಗೆ ಕಟ್ಟುವ ಕಾರಣ ಜೂಜು ಎಂದು ಪರಿಗಣಿಸಲಾಗದು ಎಂದು ಹೇಳಿವೆ.
ಇದನ್ನೂ ಓದಿ: ಆನ್‌ಲೈನ್ ಗೇಮ್ನಲ್ಲಿ ₹92 ಲಕ್ಷ ಸೋತ ಯುವಕ... ಕುಟುಂಬ ಬೀದಿಪಾಲು!