ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಿನ್ನೆಯ ಹೈಡ್ರಾಮದ ಬಳಿಕ, ನಾರದ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ನ ಮುಖಂಡರಾದ ಮದನ್ ಮಿತ್ರಾ ಮತ್ತು ಸೋವನ್ ಚಟರ್ಜಿಯನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾಮೀನಿಗೆ ಹೈಕೋರ್ಟ್ ತಡೆ ನೀಡಿದ ಬಳಿಕ ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿರಿಸಲಾಗಿದ್ದ ಮದನ್ ಮಿತ್ರಾ ಮತ್ತು ಸೋವನ್ ಚಾಟರ್ಜಿ ಅವರಿಗೆ ಇಂದು ಮುಂಜಾನೆ 4.45 ರ ಸುಮಾರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರಿಬ್ಬರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಸಚಿವ ಸುಬ್ರತಾ ಮುಖರ್ಜಿ ಕೂಡ ವೈದ್ಯಕೀಯ ತಪಾಸಣೆಗಾಗಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಬಂದಿದ್ದಾರೆ.
ಇದನ್ನೂ ಓದಿ: ನಾರದ ಲಂಚ ಪ್ರಕರಣ: ಬಂಗಾಳದ ಇಬ್ಬರು ಟಿಎಂಸಿ ಸಚಿವರನ್ನು ಬಂಧಿಸಿದ ಸಿಬಿಐ
2016ರ ನಾರದ ಸ್ಟಿಂಗ್ ಟೇಪ್ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಫಿರ್ಹಾದ್ ಹಕೀಮ್ ಹಾಗೂ ಸಚಿವ ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ, ಮಾಜಿ ಸಚಿವ ಸೋವನ್ ಚಟರ್ಜಿಯನ್ನು ಸಿಬಿಐ ನಿನ್ನೆ ಬಂಧಿಸಿತ್ತು. ಇದನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನನ್ನನ್ನೂ ಬಂಧಿಸಿ ಎಂದು ಸಿಬಿಐ ಕಚೇರಿಗೆ ಬಂದಿದ್ದರು. ರಾಜ್ಯಾದ್ಯಂತ ಟಿಎಂಸಿ ಬೆಂಬಲಿಗರು ಧರಣಿ ನಡೆಸಿದ್ದರು.
ಇದನ್ನೂ ಓದಿ: ನಾರದಾ ವಿವಾದ: ಟಿಎಂಸಿ ನಾಯಕರ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್ ತಡೆ
ನಿನ್ನೆ ಸಂಜೆ ವೇಳೆ ಬಂಧಿತ ಟಿಎಂಸಿ ನಾಯಕರಿಗೆ ಸಿಬಿಐನ ವಿಶೇಷ ನ್ಯಾಯಾಲಯ ನೀಡಿದ್ದ ಮಧ್ಯಂತರ ಜಾಮೀನು ನೀಡಿತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಲ್ಕತ್ತಾ ಹೈಕೋರ್ಟ್ ಜಾಮೀನಿಗೆ ತಡೆಯಾಜ್ಞೆ ನೀಡಿದೆ.