ನಿರ್ಮಲ್ (ತೆಲಂಗಾಣ): ಭಾರತದಲ್ಲಿ ಸಸ್ಯಾಹಾರದಂತೆ ಮಾಂಸಾಹಾರವೂ ಸಾಮಾನ್ಯ. ಅದರಲ್ಲೂ ತೆಲಂಗಾಣದಲ್ಲಿ ಮದುವೆ, ಹುಟ್ಟುಹಬ್ಬ ಸಮಾರಂಭಗಳಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಮಾಡುವುದು ಸಂಪ್ರದಾಯವಾಗಿ ಬಿಟ್ಟಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಮಾಂಸಾಹಾರ, ಮದ್ಯಪಾನಕ್ಕೆ ಸ್ವಯಂ ಪ್ರೇರಿತ ನಿರ್ಬಂಧವನ್ನು ಗ್ರಾಮಸ್ಥರೇ ಹಾಕಿಕೊಂಡಿದ್ದಾರೆ.
ಹೌದು, ನಿರ್ಮಲ್ ಜಿಲ್ಲೆ ಮುಧೋಳ ವಲಯದ ಮಚ್ಕಲ್ ಗ್ರಾಮಸ್ಥರು ಮಾಂಸಾಹಾರ, ಮದ್ಯಪಾನದಿಂದ ಬಹು ದೂರವಿದ್ದಾರೆ. ಈ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನಸಂಖ್ಯೆ ಇದೆ. ಎಲ್ಲ ಜಾತಿ-ಜನಾಂಗದ ಜನರೂ ಇಲ್ಲಿ ವಾಸವಿದ್ದಾರೆ. ಆದರೆ, ಗ್ರಾಮದಲ್ಲಿ ಕಳೆದ 30-40 ವರ್ಷಗಳಿಂದ ಸಸ್ಯಾಹಾರ ಸೇವಿಸುವುದನ್ನೇ ಗ್ರಾಮಸ್ಥರು ಅಭ್ಯಾಸ ಮಾಡಿಕೊಂಡಿದ್ದಾರೆ. ಮದುವೆ ಸೇರಿ ಇತರೆ ಸಮಾರಂಭಗಳಲ್ಲೂ ಸಸ್ಯಾಹಾರ ಮಾಡುವ ಸಂಪ್ರದಾಯವನ್ನೇ ರೂಢಿಕೊಳ್ಳಲಾಗಿದೆ.
'ನಮ್ಮ ಗ್ರಾಮದಲ್ಲಿ ಯಾರೂ ಮಾಂಸ ತಿನ್ನುವುದಿಲ್ಲ. ನಾನು ಹುಟ್ಟಿದಾಗಿನಿಂದ ನಮ್ಮಲ್ಲಿ ಮೇಕೆ, ಕುರಿ ಕಡಿಯುತ್ತಿರುವುದನ್ನು ಕಣ್ಣಾರೆ ನೋಡಿಲ್ಲ. ಅನೇಕ ಗ್ರಾಮಗಳಲ್ಲಿ ಸಣ್ಣ ಮಕ್ಕಳು ಸಹ ಮದ್ಯ ಸೇವನೆಯಂತಹ ದುಶ್ಚಟಗಳಿಗೆ ದಾಸರಾಗಿದ್ದಾರೆ. ಪಾರ್ಟಿಗಳ ಹೆಸರಿನಲ್ಲಿ ಆರೋಗ್ಯವನ್ನೂ ಹಾಳು ಮಾಡಲಾಗುತ್ತಿದೆ. ನಮ್ಮ ಗ್ರಾಮದಲ್ಲಿ ಎಲ್ಲರೂ ಸಸ್ಯಾಹಾರಿಗಳಾಗಿದ್ದು, ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕೆಂದು ಬಯಸುತ್ತೇವೆ ಎಂದು 46 ವರ್ಷದ ಸೂರ್ಯವಂಶಿ ಗೋವಿಂದ್ ರಾವ್ ತಿಳಿಸಿದ್ದಾರೆ.
ಈ ಗ್ರಾಮದಲ್ಲಿ ನಡೆಯುವ ಯಾವುದೇ ಔತಣಕೂಟಗಳಲ್ಲಿ ಅತಿಥಿಗಳಿಗೆ ಯಾವುದೇ ರೀತಿಯ ಮಾಂಸ ಬಡಿಸುವುದಿಲ್ಲ ಮತ್ತು ಮದ್ಯವನ್ನೂ ನೀಡುವುದಿಲ್ಲ. ಇದರಿಂದ ನಮ್ಮಲ್ಲಿ ಘರ್ಷಣೆಗಳು ನಡೆಯುವುದಿಲ್ಲ. ಇತರ ಗ್ರಾಮಗಳ ಜನರು ಸಹ ಇದನ್ನು ಮೆಚ್ಚಿಕೊಂಡಿದ್ದಾರೆ. ಜತೆಗೆ ಅದನ್ನು ತಮ್ಮ ಗ್ರಾಮದಲ್ಲಿಯೂ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಇಂದಿನ ದಿನಗಳಲ್ಲಿ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಉತ್ತಮ ಎಂದು ವೈದ್ಯರು ಸಹ ಸಲಹೆ ನೀಡುತ್ತಿದ್ದಾರೆ. ತರಕಾರಿಗಳು ಮತ್ತು ಸೊಪ್ಪುಗಳು ಆರೋಗ್ಯಕ್ಕೆ ಎಲ್ಲ ರೀತಿಯಿಂದಲೂ ಒಳ್ಳೆಯದು ಎಂದು ಹೇಳಲಾಗುತ್ತದೆ ಎಂದು ಇತರ ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ: 2014ರ ಮುಂಚೆ 2 ಹೊತ್ತಿನ ಊಟವೇ ಬಡವರ ಪಾಲಿಗೆ ದೊಡ್ಡ ಹೋರಾಟವಾಗಿತ್ತು: ಗೃಹ ಸಚಿವ ಅಮಿತ್ ಶಾ