ನವದೆಹಲಿ: ಹೊಸದಾಗಿ ಪ್ರಾರಂಭಿಸಲಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಒಂದಿಲ್ಲಾ ಒಂದು ವಿಘ್ನ ಕಾಡುತ್ತಿದೆ. ಮೊನ್ನೆಯಷ್ಟೇ ಎಮ್ಮೆಗಳಿಗೆ ಗುದ್ದಿ ಮುಂದಿನ ಭಾಗ ಕಳಚಿಕೊಂಡಿದ್ದು ದೊಡ್ಡ ಸುದ್ದಿಯಾಗಿದ್ದರೆ, ನಿನ್ನೆ ಬೇರಿಂಗ್ ದೋಷ ಉಂಟಾಗಿ ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಘಟನೆ ನಡೆದಿದೆ.
ಗಾಂಧಿನಗರ-ಮುಂಬೈ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ರೈಲು ಎಮ್ಮೆಗಳ ಹಿಂಡಿಗೆ ಗುದ್ದಿತ್ತು. ಘಟನೆಯಲ್ಲಿ ಮೂರು ಎಮ್ಮೆಗಳು ಮೃತಪಟ್ಟಿದ್ದಲ್ಲದೇ, ರೈಲಿನ ಮುಂಭಾಗ ಜಖಂ ಆಗಿತ್ತು. ಇದು ಮರೆಯುವ ಮುನ್ನವೇ ನವದೆಹಲಿ- ವಾರಣಾಸಿ ಮಾರ್ಗವಾಗಿ ರೈಲು ಸಂಚರಿಸುತ್ತಿದ್ದ ವೇಳೆ ಬೇರಿಂಗ್ ಜಾಮ್ ಆಗಿ ಸಮಸ್ಯೆ ಉಂಟಾಗಿದೆ. ಬಳಿಕ ಸರಿ ಮಾಡಿದರೂ ಫ್ಲಾಟ್ ಟೈರ್ ಕಾರಣ ಪ್ರಯಾಣಿಕರನ್ನು ಇಳಿಸಿ ಶತಾಬ್ದಿ ರೈಲಿಗೆ ಕಳುಹಿಸಲಾಯಿತು.
ವಂದೇ ಭಾರತ್ ರೈಲು ಬೇರಿಂಗ್ ಸಮಸ್ಯೆಗೀಡಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ದಿನಗಳ ಹಿಂದೆ ಗಾಂಧಿನಗರ-ಮುಂಬೈ ಮಾರ್ಗವಾಗಿ ರೈಲು ಸಂಚರಿಸುತ್ತಿದ್ದಾಗ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ 3 ಎಮ್ಮೆಗಳ ಸಾವಿಗೆ ಕಾರಣವಾಗಿದ್ದಲ್ಲದೇ, ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇದಕ್ಕೆ ಪರ- ವಿರೋಧಗಳು ಕೇಳಿ ಬಂದಿದ್ದವು.
ಓದಿ: ಕಾಂಗ್ರೆಸ್ನ ಬುಡಕಟ್ಟು ಸಮುದಾಯದ ಶಾಸಕನ ಮೇಲೆ ಹಲ್ಲೆ: ರಾತ್ರೋರಾತ್ರಿ ಬೆಂಬಲಿಗರಿಂದ ಭಾರೀ ಪ್ರತಿಭಟನೆ