ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪ್ರತಿಧ್ವನಿಸಿತು. ಪ್ರಕರಣ ಸಂಬಂಧ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ವಿಪಕ್ಷಗಳು ಭಾರಿ ಕದ್ದಲ ಎಬ್ಬಿಸಿದವು. ಕಲಾಪ ತಹಬದಿಗೆ ಬಾರದ ಹಿನ್ನೆಯಲ್ಲಿ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಪ್ರಧಾನಿ ಮೋದಿ ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳಲುತ್ತಿಲ್ಲ. ಎಸ್‌ಐಟಿ ವರದಿ ಆಧರಿಸಿ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಪ್ರಧಾನಿ ಮೋದಿ ಅವರು ಆರೋಪಿ ಸ್ಥಾನದಲ್ಲಿರುವ ಅಜಯ್ ಮಿಶ್ರಾ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಸಭೆ ಚೇರ್ಮನ್ ನಮ್ಮ ಮನವಿಯನ್ನು ವ್ಯವಹಾರದ ಪಟ್ಟಿಗೆ ತೆಗೆದುಕೊಳ್ಳದೆ ಏಕಾಏಕಿ ಕಲಾಪವನ್ನು ಮುಂದೂಡಿದರು ಎಂದು ಖರ್ಗೆ ಆರೋಪಿಸಿದರು.
ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಲಖೀಂಪುರ ಖೇರಿ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡುತ್ತಿದೆ. ಸಂಸತ್ ಚರ್ಚೆಯ ಸ್ಥಳವಾಗಿದೆ. ವಿರೋಧ ಪಕ್ಷಗಳು ರಚನಾತ್ಮಕವಾದ ಸಲಹೆಗಳನ್ನು ನೀಡಬೇಕು. ಆದರೆ ಅವರು ಇದನ್ನು ನಿರಾಕರಿಸಿದ್ದಾರೆ ಎಂದರು.
ಇದನ್ನೂ ಓದಿ: ಲಖೀಂಪುರ್ ಖೇರಿ ಹಿಂಸಾಚಾರ ಪೂರ್ವಯೋಜಿತ: ಆರೋಪಿಗಳ ವಿರುದ್ಧ ಹೊಸ ಸೆಕ್ಷನ್ ಸೇರಿಸಲು ಎಸ್‌ಐಟಿ ಅರ್ಜಿ