ಹೈದರಾಬಾದ್: ದೆಹಲಿಯ ಹೋಮಿಯೋಪಥಿಕ್ ಸಿಸ್ಟಮ್ ಆಫ್ ಮೆಡಿಸಿನ್ ಮಂಡಳಿಯ ಉಪಾಧ್ಯಕ್ಷ, ಹೋಮಿಯೋಪಥಿ ವೈದ್ಯ ಮತ್ತು ಸಂಶೋಧಕ ಮತ್ತು ಡಾ.ಎ.ಕೆ. ಅರುಣ್, ಎಂ.ಡಿ. (ಹೋಮಿಯೋಪತಿ), ಕೆಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಇದು ಕರೋನಾ ಸಮಯ. ಹೋಮಿಯೋಪಥಿ ವೈದ್ಯನಾಗಿ ನಾನು ನನ್ನ ಚಿಕಿತ್ಸಾಲಯದಲ್ಲಿ ಅನೇಕ ಹೊಸ ವಿಷಯಗಳನ್ನು ಅನುಭವಿಸುತ್ತಿದ್ದೇನೆ. ನನ್ನ ರೋಗಿಯೊಬ್ಬರಲ್ಲಿ ಒಂದು ತಿಂಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಒಂದು ತಿಂಗಳಿನಿಂದಲೂ ಅವರ ಕೊರೊನಾ ವರದಿ ಪಾಸಿಟಿವ್ ಎಂದೇ ಬರುತ್ತಿದೆ. ಈ ಸ್ಥಿತಿಯನ್ನು "ಲಾಂಗ್ ಕೋವಿಡ್" ಎಂದು ಕರೆಯಲಾಗುತ್ತದೆ.
ಇದು ಜನರ ಜೀವನದ ಮೇಲೆ ದುರ್ಬಲಗೊಳಿಸುವ ಪರಿಣಾಮವನ್ನು ಉಂಟುಮಾಡುತ್ತದೆ. ಇಲ್ಲಿಯವರೆಗೆ ಸಾಂಕ್ರಾಮಿಕ ಸಮಯದಲ್ಲಿ ಜೀವಗಳನ್ನು ಉಳಿಸುವತ್ತ ಗಮನ ಹರಿಸಲಾಗಿದೆ, ಆದರೆ ಇದೀಗ ಜನರು ಕೋವಿಡ್ -19 ಸೋಂಕಿನ ದೀರ್ಘಕಾಲೀನ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ.
ಲಾಂಗ್ ಕೋವಿಡ್ ಎಂದರೇನು?
‘ಲಾಂಗ್ ಕೋವಿಡ್’ ಕುರಿತು ಯಾವುದೇ ವೈದ್ಯಕೀಯ ವ್ಯಾಖ್ಯಾನ ಇನ್ನೂ ಲಭ್ಯವಿಲ್ಲ. ಇದರ ಸಾಮಾನ್ಯ ಲಕ್ಷಣವೆಂದರೆ ದುರ್ಬಲಗೊಳಿಸುವ ಆಯಾಸ.
ಉಸಿರಾಟದ ಸಮಸ್ಯೆ, ಕೆಮ್ಮು, ಕೀಲು ನೋವು, ಸ್ನಾಯು ನೋವು, ಶ್ರವಣ ಮತ್ತು ದೃಷ್ಟಿ ಸಮಸ್ಯೆಗಳು, ತಲೆನೋವು, ವಾಸನೆ ಮತ್ತು ರುಚಿಯ ನಷ್ಟ ಹಾಗೂ ಹೃದಯ, ಶ್ವಾಸಕೋಶ, ಮೂತ್ರಪಿಂಡ ಮತ್ತು ಕರುಳಿಗೆ ಹಾನಿ ಸೇರಿದಂತೆ ಇತರ ಲಕ್ಷಣಗಳನ್ನು ಇದು ಒಳಗೊಂಡಿದೆ.
ಖಿನ್ನತೆ, ಆತಂಕ, ಸಾವಿನ ಭಯ, ಏಕಾಂಗಿಯಾಗಿರುವ ಭಯ ಮತ್ತು ಸ್ಪಷ್ಟವಾಗಿ ಯೋಚಿಸಲು ಹೆಣಗಾಡುವುದು ಸೇರಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡಾ ವರದಿಯಾಗಿವೆ. ಇದು ಜನರ ಜೀವನದ ಗುಣಮಟ್ಟವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.
ಲಾಂಗ್ ಕೋವಿಡ್ ಕೇವಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಲ್ಲಿ ಮಾತ್ರವಲ್ಲ, ಸೌಮ್ಯವಾದ ಸೋಂಕನ್ನು ಹೊಂದಿರುವ ಜನರಿಗೂ ಈ ಆರೋಗ್ಯ ಸಮಸ್ಯೆಗಳು ಕಾಡಬಹುದು. 10 ಜನರಲ್ಲಿ ಒಬ್ಬರು ಸೋಂಕು ತಗುಲಿ 3 ವಾರ ಕಳೆದರೂ ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿದ್ದಾರೆ.
ಯುನೈಟೆಡ್ ಕಿಂಗ್‌ಡಂನ ಒಂದು ಅಧ್ಯಯನವು, ಯುಕೆಯ ಸುಮಾರು ನಾಲ್ಕು ಮಿಲಿಯನ್ ಜನರಲ್ಲಿ 12% ಸೋಂಕಿತರು ಸೋಂಕು ತಗುಲಿ 30 ದಿನಗಳ ನಂತರವೂ ರೋಗಲಕ್ಷಣಗಳನ್ನು ಹೊಂದಿದ್ದಾರೆಂದು ಕಂಡುಹಿಡಿದಿದೆ.
ಇನ್ನೊಂದು ದತ್ತಾಂಶವು, ಒಟ್ಟು ಸೋಂಕಿತರಲ್ಲಿ, 50 ಜನರಲ್ಲಿ ಒಬ್ಬರಿಗೆ 90 ದಿನಗಳ ನಂತರ ದೀರ್ಘ-ಕೋವಿಡ್ ಲಕ್ಷಣಗಳಿವೆ ಎಂದು ಸೂಚಿಸುತ್ತದೆ.
ವೈರಸ್ ದೀರ್ಘ ಕೋವಿಡ್ ಅನ್ನು ಹೇಗೆ ಉಂಟುಮಾಡುತ್ತದೆ?
ವೈರಸ್ ಅನ್ನು ದೇಹದ ಹೆಚ್ಚಿನ ಭಾಗಗಳಿಂದ ತೆರವುಗೊಳಿಸಿರಬಹುದು, ಆದರೆ ದೇಹದ ಕೆಲವು ಸಣ್ಣ ಭಾಗಗಳಲ್ಲಿ ವೈರಸ್ ಉಳಿದಿರುತ್ತವೆ.
"ದೀರ್ಘಕಾಲದ ಅತಿಸಾರ ಇದ್ದರೆ ನಿಮ್ಮ ಕರುಳಿನಲ್ಲಿ ವೈರಸ್ ಇದೆ ಎಂದರ್ಥ, ವಾಸನೆಯ ನಷ್ಟವಿದ್ದರೆ ವೈರಸ್ ನರಗಳಲ್ಲಿದೆ ಎಂದು ಭಾವಿಸಬಹುದು. ಆದ್ದರಿಂದ ವೈರಸ್ ಎಲ್ಲಿದೆಯೀ ಅಲ್ಲಿ ಅದು ಸಮಸ್ಯೆಯನ್ನು ಉಂಟುಮಾಡಬಹುದು" ಎಂದು ಲಂಡನ್ನ ಕಿಂಗ್ಸ್ ಕಾಲೇಜಿನ ಪ್ರೊಫೆಸರ್ ಟಿಮ್ ಸ್ಪೆಕ್ಟರ್ ಹೇಳುತ್ತಾರೆ.
ಕೊರೊನಾ ವೈರಸ್ ದೇಹದಲ್ಲಿನ ವೈವಿಧ್ಯಮಯ ಜೀವಕೋಶಗಳಿಗೆ ನೇರವಾಗಿ ಸೋಂಕು ತಗುಲಿಸುತ್ತದೆ ಮತ್ತು ಅತಿಯಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ ಮತ್ತು ಇದು ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ.
ಕೊರೊನಾ ವೈರಸ್ನಿಂದ ಉಂಟಾಗುವ ವ್ಯಾಪಕವಾದ ಉರಿಯೂತವು ಕಿರಿಯ ವಯಸ್ಸಿನ ಜನರಲ್ಲಿ ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ದೀರ್ಘ ಕೋವಿಡ್ ಹೊಂದಿದ್ದರೆ ಏನು ಮಾಡಬೇಕು?
- ಆರೋಗ್ಯದ ಕಾಳಜಿ ವಹಿಸಿಕೋಮಡು, ಸಾಕಷ್ಟು ವಿಶ್ರಾಂತಿ ಮಾಡಿ.
- ಪ್ರತಿ ದಿನದ ಯೋಜನೆ ರೂಪಿಸಿ ಮತ್ತು ದಣಿವಾಗದಂತೆ ನೋಡಿಕೊಳ್ಳಿ.
- ನೀವು ಏನು ಮಾಡಬೇಕು ಮತ್ತು ಯಾವುದನ್ನು ಮುಂದೂಡಬಹುದು ಎಂಬುದರ ಕುರಿತು ಯೋಚಿಸಿ.
- ನೀವು ನಿರೀಕ್ಷಿಸಿದಷ್ಟು ಬೇಗ ಚೇತರಿಸಿಕೊಳ್ಳದಿದ್ದರೆ ನಿಮ್ಮ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಕೋವಿಡ್-19ನ ಸೌಮ್ಯ ಲಕ್ಷಣಗಳಿಂದ ಅನಾರೋಗ್ಯಕ್ಕೆ ಒಳಗಾದವರು ಸುಮಾರು 2 ವಾರಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಲಾಂಗ್ ಕೋವಿಡ್ ಹೊಂದಿರುವವರು ತಿಂಗಳುಗಳು ಕಳೆದರೂ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. "ಲಾಂಗ್ ಕೋವಿಡ್" ಎಂದು ಕರೆಯಲ್ಪಡುವ ಈ ವಿದ್ಯಮಾನವು ವಿಜ್ಞಾನಿಗಳು ಹಾಗೂ ಸಂಶೋಧಕರನ್ನು ಕೂಡಾ ಗೊಂದಲಕ್ಕೀಡು ಮಾಡಿದೆ.
ಹೋಮಿಯೋಪತಿ ಚಿಕಿತ್ಸೆ:
ಹೆಚ್ಚಿನ ಸಂದರ್ಭಗಳಲ್ಲಿ ಹೋಮಿಯೋಪತಿ ಔಷಧಿಯನ್ನು ಬಳಸಿದವರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ರೋಗಿಗಳ ಪ್ರತ್ಯೇಕತೆಗೆ ಅನುಗುಣವಾಗಿ ಆರ್ಸೆನಿಕಮ್ ಆಲ್ಬಮ್, ಆಸಿಡ್ ಸಾರ್ಕೊಲ್ಯಾಕ್ಟಿಕಮ್, ಬೆಲ್ಲಡೋನ್ನಾ, ಬ್ರಯೋನಿಯಾ, ಕ್ಯಾಂಪೋರಾ, ಆಕ್ಸಿಲೋಕೊಸಿನಮ್ ಇತ್ಯಾದಿ ಔಷಧಿಗಳನ್ನು ನೀಡಲಾಗುತ್ತದೆ. ಅರ್ಹವಾದ ಹೋಮಿಯೋಪತಿ ವೈದ್ಯರ ಮಾರ್ಗದರ್ಶನದಲ್ಲಿ ಹೋಮಿಯೋಪತಿ ಔಷಧಿಯನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಡಾ.ಎ.ಕೆ. ಅರುಣ್ ಅವರನ್ನು docarun2@gmail.com ಸಂಪರ್ಕಿಸಬಹುದು.