ಗೋಲಾಘಾಟ್ ( ಅಸ್ಸೋಂ): ಆಹಾರ ಹುಡುಕುತ್ತಾ ಜನವಸತಿ ಪ್ರದೇಶಕ್ಕೆ ಬಂದ ಕಾಡಾನೆಗಳ ಮೇಲೆ ಸ್ಥಳೀಯರು ಕ್ರೂರವಾಗಿ ದಾಳಿ ನಡೆಸಿದ ಘಟನೆ ಅಸ್ಸೋಂನ ಗೋಲಘಾಟ್ ಜಿಲ್ಲೆಯ ನಂಬೋರ್ ಬಳಿ ಭಾನುವಾರ ರಾತ್ರಿ ನಡೆದಿದೆ.
ಕಾಡಾನೆಗಳು ಭತ್ತದ ಗದ್ದೆಗಳಿಗೆ ಆಗಾಗ ದಾಳಿ ನಡೆಸುತ್ತವೆ. ಹೀಗಾಗಿ ಸ್ಥಳೀಯ ಜನರು ಮತ್ತು ವನ್ಯ ಪ್ರಾಣಿಗಳ ನಡುವಿನ ಸಂಘರ್ಷ ನಂಬೋರ್ ಪ್ರದೇಶದಲ್ಲಿ ಸಾಮಾನ್ಯವಾಗಿದೆ.
ಭಾನುವಾರ ಆಹಾರ ಹುಡುಕುತ್ತಾ ಬಂದಿದ್ದ ಕಾಡಾನೆಗಳ ಮೇಲೆ ಸ್ಥಳೀಯರು ಈಟಿ, ಪಂಜು ಮತ್ತು ಇತರ ಮಾರಕಾಸ್ತ್ರಗಳನ್ನು ಎಸೆದಿದ್ದಾರೆ. ಕೆಲವರು ಈ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಜನರು ಎಸೆದ ಪಂಜು ಮತ್ತು ಈಟಿಗಳಿಂದ ಆನೆಯೊಂದರ ಬೆನ್ನಿಗೆ ಗಾಯಗಳಾಗಿವೆ ಎನ್ನಲಾಗಿದೆ.