ಹರಿಯಾಣ: ಪ್ರತಿಯೊಬ್ಬರೂ ತಮಗೆ ಸೂಕ್ತವಾದ ಸಂಗಾತಿಯನ್ನು ಆರಿಸಿಕೊಳ್ಳಲು ಸ್ವತಂತ್ರರಾಗಿದ್ದಾರೆ. ಹೀಗೆ ಆರಿಸಿಕೊಳ್ಳಲಾದ ಸಂಗಾತಿಯ ಬಗ್ಗೆ ತನಿಖೆ ನಡೆಸುವುದು ಕೋರ್ಟ್ ಕೆಲಸವಲ್ಲ ಎಂದು ಪಂಜಾಬ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ಲಿವ್ ಇನ್ ರಿಲೇಶನಶಿಪ್ನಲ್ಲಿ ಬದುಕುತ್ತಿದ್ದ ಜೋಡಿಗಳು ತಮಗೆ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಇಂಥ ಪ್ರಕರಣಗಳಲ್ಲಿ ಜೋಡಿಗಳಿಗೆ ರಕ್ಷಣೆ ನೀಡದ ಕಾರಣ ಅವರೇನಾದರೂ ಮರ್ಯಾದಾ ಹತ್ಯೆಗೀಡಾದರೆ ಅದು ಕಾನೂನಿನ ವೈಫಲ್ಯವಾಗುತ್ತದೆ ಎಂದು ತಿಳಿಸಿದೆ.
ಲಿವ್ ಇನ್ ರಿಲೇಶನಶಿಪ್ ಇಟ್ಟುಕೊಳ್ಳುವುದು ಕಾನೂನುಬಾಹಿರವಲ್ಲ. ಹಾಗಂತ ಎಲ್ಲರೂ ಲಿವ್ ಇನ್ ರಿಲೇಶನಶಿಪ್ ಒಪ್ಪಿಕೊಳ್ಳಬೇಕೆಂದಿಲ್ಲ, ಆದರೆ, ಇದು ಕಾನೂನು ಬಾಹಿರವಲ್ಲ. ಮದುವೆಯಾಗದೇ ಒಟ್ಟಾಗಿ ವಾಸಿಸುವುದು ನಮ್ಮ ದೇಶದ ಕಾನೂನಿನಲ್ಲಿ ಅಪರಾಧವಲ್ಲ ಎಂದು ಹೈಕೋರ್ಟ್ ಹೇಳಿದೆ.
ಲಿವ್ ಇನ್ ರಿಲೇಶನಶಿಪ್ ಮಾದರಿಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ಜೋಡಿಯೊಂದು ತಮಗೆ ರಕ್ಷಣೆ ನೀಡಬೇಕೆಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಯುವತಿಗೆ 17 ವರ್ಷ 3 ತಿಂಗಳು ಹಾಗೂ ಯುವಕನಿಗೆ 20 ವರ್ಷ ವಯಸ್ಸಾಗಿದೆ. ಹೀಗಾಗಿ ಇವರಿಗೆ ಕಾನೂನಾತ್ಮಕ ರಕ್ಷಣೆ ನೀಡಕೂಡದು ಎಂದು ಪ್ರಕರಣದಲ್ಲಿ ಪಂಜಾಬ್ ಸರ್ಕಾರ ವಾದ ಮಾಡಿತ್ತು.
ಇಂಥ ಪ್ರಕರಣಗಳಲ್ಲಿ ನ್ಯಾಯಾಲಯವು ರಕ್ಷಣೆ ನೀಡಲು ನಿರಾಕರಿಸಿದಲ್ಲಿ, ಪ್ರಜೆಗಳ ಸ್ವಾತಂತ್ರ್ಯ ಹಾಗೂ ಬದುಕುವ ಹಕ್ಕನ್ನು ಕಸಿದು ಕೊಂಡಂತಾಗುತ್ತದೆ ಎಂದು ಹೇಳಿದ ಹೈಕೋರ್ಟ್ ಪೀಠ, ಜೋಡಿಗಳಿಗೆ ರಕ್ಷಣೆ ಅಗತ್ಯವಿದೆಯಾ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಟಿಂಡಾ ಎಸ್ಎಸ್ಪಿ ಅವರಿಗೆ ಸೂಚನೆ ನೀಡಿತ್ತು.